×
Ad

ಮೇಕೆದಾಟು ಯೋಜನೆ ನಮ್ಮ ಹಕ್ಕು, ಇದರಲ್ಲಿ ರಾಜಕೀಯ ಹಿತಾಸಕ್ತಿಯಿಲ್ಲ ಎಂದ ಸಿದ್ದರಾಮಯ್ಯ

Update: 2021-12-21 14:06 IST

ಬೆಳಗಾವಿ: ಮೇಕೆದಾಟು ಯೋಜನೆ ನಮ್ಮ ಹಕ್ಕು, ಅದರ ಜಾರಿಯಾಗಬೇಕು ಎಂಬುದು ನಮ್ಮ ಆಶಯ. ಇದರಲ್ಲಿ ರಾಜಕೀಯ ಹಿತಾಸಕ್ತಿಯ ಮಾತು ಬರಲ್ಲ. ಜನರ ಹಿತಾಸಕ್ತಿ ಮಾತ್ರ ಇದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1968 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮೇಕೆದಾಟು ಯೋಜನೆಗೆ ಯೋಚನೆ ಮಾಡಿತ್ತು, ಆದರೆ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದುದ್ದರಿಂದ ಯೋಜನೆ ಜಾರಿ ಆಗಿರಲಿಲ್ಲ. 2013 ನಾವು ಅಧಿಕಾರಕ್ಕೆ ಬಂದಮೇಲೆ ಯೋಜನೆಗೆ ಡಿ.ಪಿ.ಆರ್ ಸಿದ್ಧಪಡಿಸಿದ್ದೆವು. ಆಗ ಈ ಯೋಜನೆಯ ಅಂದಾಜು ವೆಚ್ಚ 5912 ಕೋಟಿ ರೂ.,  2018 ರಲ್ಲಿ ಡಿ.ಕೆ ಶಿವಕುಮಾರ್ ಅವರು ಸಚಿವರಾಗಿದ್ದ ವೇಳೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದರು. ಆಗ  9,500 ಕೋಟಿ ರೂ.ಯೋಜನಾ ವೆಚ್ಚ ಇತ್ತು ಎಂದು ತಿಳಿಸಿದರು.

ಬೆಂಗಳೂರು ನಗರ ಹಾಗೂ ಸುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಇದು. ಸಮುದ್ರ ಪಾಲಾಗಿ ವ್ಯರ್ಥವಾಗುತ್ತಿರುವ 66 ಟಿ.ಎಂ.ಸಿ ನೀರನ್ನು ಮೇಕೆದಾಟು ಜಲಾಶಯದಲ್ಲಿ ಶೇಖರಿಸಿ, ಕುಡಿಯುವ ನೀರಿನ ಹಾಗೂ 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಬಳಕೆ ಮಾಡುವ ಉದ್ದೇಶ ಹೊಂದಿದೆ. ಈಗ ಬೆಂಗಳೂರಿನ 30% ಜನರಿಗೆ ಕಾವೇರಿ ನೀರಿನ ಪೂರೈಕೆ ಆಗುತ್ತಿಲ್ಲ. ಇಡೀ ನಗರಕ್ಕೆ ಕಾವೇರಿ ನೀರು ಸರಬರಾಜು ಆಗಬೇಕೆಂದರೆ ಈ ಯೋಜನೆ ಜಾರಿಯಾಗಲೇಬೇಕು, ಇದರ ಜೊತೆಗೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ ಎಂದರು.

ಈ ಯೋಜನೆಯಿಂದ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡಿಗೂ ಹಲವು ಅನುಕೂಲ ಆಗಲಿದೆ. 2018 ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ನಡುವಿನ ಜಲವಿವಾದ ಇತ್ಯರ್ಥಗೊಂಡಿದ್ದು, ಸ್ವಾಭಾವಿಕ ವರ್ಷವೊಂದರಲ್ಲಿ ನಾವು 177.25 ಟಿ.ಎಂ.ಸಿ ನೀರು ಕೊಡಬೇಕು ಎಂದು ತೀರ್ಪು ಬಂದಿದೆ. ಈಗ ವ್ಯಾಜ್ಯ ಬಗೆಹರಿದಿರುವುದರಿಂದ ತಮಿಳುನಾಡಿನವರಿಗೆ ಅವರ ಪಾಲಿನ ನೀರನ್ನು ಪಡೆಯುವ ಹಕ್ಕು ಬಿಟ್ಟರೆ, ಯೋಜನೆಯ ಬಗ್ಗೆ ತಕರಾರು ಮಾಡುವ ಬೇರಾವ ಕಾನೂನಾತ್ಮಕ ಹಕ್ಕು ಅವರಿಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಸಿರು ನ್ಯಾಯಾಧೀಕರಣದವರು ಕೂಡ ಈ ಯೋಜನೆಯ ಬಗ್ಗೆ ಯಾವ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಿದ್ದಾಗ ಯಾವುದೇ ತಕರಾರು ಇಲ್ಲದಿದ್ದರೂ, ಯೋಜನಾ ವರದಿ ಸಿದ್ಧವಾಗಿದ್ದರೂ, ತಮಿಳುನಾಡಿಗೆ ಕಾನೂನಾತ್ಮಕವಾಗಿ ವಿರೋಧಿಸುವ ಹಕ್ಕು ಇಲ್ಲದಿದ್ದರೂ ಯೋಜನೆ ಅನುಷ್ಠಾನ ಆಗಿಲ್ಲ. ಡಬಲ್ ಇಂಜಿನ್ ಸರ್ಕಾರ ಎನ್ನುವ ಬಿಜೆಪಿ ಅವರು ಇಷ್ಟೊತ್ತಿಗೆ ಯೋಜನೆ ಕೈಗೆತ್ತಿಕೊಳ್ಳಬೇಕಿತ್ತಲ್ಲ ಎಂದು ಹೇಳಿದರು.

ಪ್ರವಾಹ, ಅತಿವೃಷ್ಟಿ ಮುಂತಾದ ಕಾರಣಗಳಿಂದ ಹರಿವು ಹೆಚ್ಚಾದ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆ ಸಮಯದಲ್ಲಿ ವಿವಿಧ ನಾಲೆಗಳ ಮೂಲಕ ಕೃಷಿ, ವಿದ್ಯುತ್ ಉತ್ಪಾದನೆ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುವುದಾಗಿದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾದ ನೀರು ಕೂಡ ತಮಿಳು ನಾಡಿಗೆ ಹೋಗಲಿದೆ. ಇದು ಅವರಿಗೆ ಇನ್ನೊಂದು ಲಾಭದ ವಿಚಾರ.

ನಾವು ಅಧಿಕಾರದಲ್ಲಿ ಇದ್ದಿದ್ದರೆ ಈ ಯೋಜನೆಯನ್ನು ಈಗಾಗಲೇ ಆರಂಭ ಮಾಡುತ್ತಿದ್ದೆವು. ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷ ಜನವರಿ 9 ರಿಂದ 19 ರ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಮೊದಲು ಬೆಂಗಳೂರಿನ ವರೆಗೆ ಪಾದಯಾತ್ರೆ ಮಾಡಿ, ಮತ್ತೆ ಸುತ್ತಮುತ್ತಲಿನ ಹತ್ತಾರು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡುತ್ತೇವೆ. ಒಟ್ಟು ಹತ್ತು ದಿನ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿರುವ ಇತರೆ ಸಂಘ, ಸಂಸ್ಥೆಗಳು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತೇವೆ, ಆಸಕ್ತರು ಭಾಗವಹಿಸಬಹುದು. ಇದು ಪಕ್ಷದ ಕಾರ್ಯಕ್ರಮವಲ್ಲ, ರಾಜ್ಯದ ಹಿತದೃಷ್ಟಿಯಿಂದ ರೂಪಿಸಿರುವ ಹೋರಾಟ. ಸುಮಾರು ಹತ್ತು ಜಿಲ್ಲೆಗಳ 2.5 ಕೋಟಿ ಜನರಿಗೆ ಯೋಜನೆ ಜಾರಿಯಿಂದ ಅನುಕೂಲ ಆಗಲಿದೆ. ಹೀಗಾಗಿ ಕೂಡಲೇ ಸರ್ಕಾರ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ ಎಂದು ಒತ್ತಾಯಿಸಿದರು.

ಬಿಜೆಪಿ ಸರ್ಕಾರಕ್ಕೆ ಬದ್ಧತೆಯೇ ಇಲ್ಲ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಯಾವೊಂದು ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ. ಮಹದಾಯಿ, ಕೃಷ್ಣ ಮೇಲ್ದಂಡೆ, ಎತ್ತಿನಹೊಳೆ, ಭದ್ರ ಮೇಲ್ದಂಡೆ ಈ ಯಾವ ಯೋಜನೆಗಳ ಕೆಲಸವೂ ನಡೆಯುತ್ತಿಲ್ಲ. ಈ ಸರ್ಕಾರ 40% ಕಮಿಷನ್ ಹೊಡೆಯುವುದರಲ್ಲೇ ಮುಳುಗಿದೆ.

ಬಿಜೆಪಿಯವರು ರಾಷ್ಟ್ರೀಯ ಯೋಜನೆಗಳ ಅನುದಾನ ಬರುವ ಮೊದಲೇ ಟೆಂಡರ್ ಕರೆದು ಕಮಿಷನ್ ನುಂಗಿದ್ದಾರೆ. ಕೊವಿಡ್ ಹೆಸರಿನಲ್ಲಿ ಸಾವಿರಾರು ಕೋಟಿ ಹಣ ಭ್ರಷ್ಟಾಚಾರ ನಡೆಸಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಕೇಂದ್ರದಿಂದ ಹಣದ ಹೊಳೆ ಹರಿಯುತ್ತದೆ ಎಂದಿದ್ದರು,ಈಗ ಹೋಗಿ ಹಣ ತಂದು ನೀರಾವರಿ ಯೋಜನೆಯ ಕೆಲಸ ಮಾಡಬೇಕು.

ಸರ್ಕಾರ ಮೇಕೆದಾಟು ಯೋಜನೆಯನ್ನು ಇಂದೇ ಆರಂಭ ಮಾಡಿದರೆ ನಾವು ಪಾದಯಾತ್ರೆಯನ್ನು ರದ್ದುಮಾಡಿ, ಯೋಜನೆಯ ಗುದ್ದಲಿ ಪೂಜೆಯಲ್ಲಿ ಭಾಗವಹಿಸುತ್ತೇವೆ. ಪಾದಯಾತ್ರೆಯಲ್ಲಿ ನಮ್ಮ ಪಕ್ಷದ ಎಲ್ಲಾ ಶಾಸಕರು, ಮುಖಂಡರು, ಸಂಸದರು, ಮಾಜಿ ಸಚಿವರು, ನಾಡಿನ ಬಗ್ಗೆ ಕಾಳಜಿ ಇರುವ ಎಲ್ಲರೂ ಇರುತ್ತಾರೆ. ನಮ್ಮ ಹೋರಾಟಕ್ಕೆ ಇತರೆ ಪಕ್ಷದ ಮುಖಂಡರು ಬಂದು ಬೆಂಬಲಿಸಿದರೆ ಸಂತೋಷ ಎಂದರು. 

ವಿದ್ಯಾರ್ಥಿ ಸಂಘಟನೆ, ಎನ್.ಜಿ.ಒ ಗಳು, ರೈತ, ದಲಿತ, ಕನ್ನಡ ಪರ, ಆಟೋ ಚಾಲಕರ, ಟ್ಯಾಕ್ಸಿ ಚಾಲಕರ, ಕಾರ್ಮಿಕ ಮುಂತಾದ ಎಲ್ಲಾ ಸಂಘಟನೆಗಳಿಗೂ ಹೋರಾಟದಲ್ಲಿ ಭಾಗವಹಿಸಲು ವಿನಮ್ರವಾಗಿ ಆಹ್ವಾನ ನೀಡುತ್ತೇನೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News