ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ತರಬೇತಿ: ಸಚಿವ ಮುರುಗೇಶ್ ನಿರಾಣಿ

Update: 2021-12-21 11:10 GMT

ಬೆಳಗಾವಿ, ಡಿ.21: ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕೈಗಾರಿಕೆ ಸ್ಥಾಪನೆಗೆ ಮುಂದಾಗುವವರಿಗೆ ಏಳರಿಂದ ಹತ್ತು ದಿನಗಳ ಕಾಲ ತರಬೇತಿ ನೀಡಲಾಗುವುದೆಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಮಂಗಳವಾರ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮೇಕ್ ಇನ್ ಇಂಡಿಯಾ ಯೋಜನೆ ಕೇಂದ್ರ ಸರಕಾರದ ಯೋಜನೆಯಾಗಿದ್ದು, ಹೂಡಿಕೆಯನ್ನು ಸುಗಮಗೊಳಿಸಿ, ನಾವೀನ್ಯತೆ ಘೋಷಿಸಲು, ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಗುರಿ ಹೊಂದಿದೆ ಎಂದರು.

ಈ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ 95 ಬೃಹತ್ ಕೈಗಾರಿಕೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ 25 ಸಾವಿರಕ್ಕೂ ಅಧಿಕ ಕೋಟಿ ರೂ.ಬಂಡವಾಳ ಹರಿದುಬಂದಿದೆ. ಜತೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ದೊರೆತಿದೆ ಎಂದು ಸದನಕ್ಕೆ ತಿಳಿಸಿದರು.

ಸದ್ಯ ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಜಾರಿ, ಬಂಡವಾಳ ಹೂಡಿಕೆಗೆ ಕಾನೂನು ಮಾರ್ಪಾಡು, ಅನಗತ್ಯ ಕಾನೂನುಗಳನ್ನು ತೆಗೆದು ಹಾಕುವುದು ಮತ್ತು ಉದ್ಯಮಕ್ಕೆ ಮೂಲ ಸೌಕರ್ಯ ಒದಗಿಸಿ ಹೂಡಿಕೆದಾರರಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಇತ್ತೀಚೆಗೆ ಜಾರಿ ತಂದ ಹಲವು ಯೋಜನಾ ಕ್ರಮಗಳ ಬಗ್ಗೆ ಕೇಂದ್ರ ಸರಕಾರ ಪ್ರಶಂಸೆ ವ್ಯಕ್ತಪಡಿಸಿದೆ ಎಂದರು.

ಅದೇ ರೀತಿ, ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆ ಇದ್ದು, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಸದಸ್ಯ ಯು.ಬಿ.ವೆಂಕಟೇಶ್ ಪ್ರಸ್ತಾಪಿಸಿ, ಕೈಗಾರಿಕಾ ಸಚಿವರ ಜತೆ ಕಾರ್ಮಿಕ ಸಚಿವರೂ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು. ಎಲ್ಲರೂ ಒಂದು ವೇದಿಕೆಗೆ ಬಂದು ಸ್ಥಳಮಟ್ಟದ  ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News