ಮಹಾರಾಷ್ಟ್ರದಲ್ಲಿನ ಕನ್ನಡಿಗರ ರಕ್ಷಣೆಗೆ ಕ್ರಮ: ಸಚಿವ ಆರಗ ಜ್ಞಾನೇಂದ್ರ

Update: 2021-12-21 12:22 GMT

ಬೆಳಗಾವಿ, ಡಿ.21: ಕನ್ನಡ ಧ್ವಜ ಸುಟ್ಟು ಹಾಕಿದ್ದು, ಶಿವಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಅವಮಾನ ಮಾಡಿರುವ ಘಟನೆಗಳಿಂದ ನಮ್ಮ ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಉದ್ಭವಿಸಿರುವ ಪರಿಸ್ಥಿತಿಯಿಂದಾಗಿ, ಮಹಾರಾಷ್ಟ್ರದಲ್ಲಿನ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಅಲ್ಲಿನ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಬೆಳಗಾವಿಯ ಅನಗೋಳದಲ್ಲಿರುವ ಕನಕದಾಸ ಕಾಲನಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಾಂತಿಯನ್ನು ಭಂಗ ಮಾಡುವ ಕೃತ್ಯಗಳನ್ನು ಎಸಗುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂ.ಇ.ಎಸ್)ಯನ್ನು ನಿಷೇಧಿಸುವ ಸಂಬಂಧ ರಾಜ್ಯ ಸರಕಾರ ಚಿಂತನೆಯನ್ನು ಮಾಡುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ದೇಶದ್ರೋಹ ಪ್ರಕರಣ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿರುವ ಮಹನೀಯರನ್ನು ಅವಮಾನ ಮಾಡುವವರು ಮಾನಸಿಕ ರೋಗಿಗಳು, ಇಂತಹವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ನಮ್ಮ ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿ ಭಾಷಿಕರು ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದಾರೆ. ಆದರೆ, ಕೆಲವು ಕಿಡಿಗೇಡಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಈ ಸೌಹಾರ್ದ ವಾತಾವರಣಕ್ಕೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಯಾವುದೆ ಕಾರಣಕ್ಕೂ ಬಿಡುವುದಿಲ್ಲ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಎಂ.ಇ.ಎಸ್ ಕಾರ್ಯಕರ್ತರು ಮಸಿ ಬಳಿಯುವ ಮೂಲಕ ಮತ್ತೆ ಉದ್ಧಟತನವನ್ನು ಪ್ರದರ್ಶಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 38, ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಹಾಗೂ ಖಾನಾಪುರದಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಈ ಎಲ್ಲ ಘಟನೆಗಳ ಹಿಂದೆ ಯಾರ ಕೈವಾಡವಿದೆ ಅನ್ನೋದು ಬೆಳಕಿಗೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಪೊಲೀಸರು ತನಿಖೆ ಮಾಡಿ ಸತ್ಯಾಂಶ ಹೊರಗೆ ತರಲಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಕಿಡಿಗೇಡಿಗಳ ಬಂಧನ

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 38, ಶಿವಾಜಿ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಹಾಗೂ ಖಾನಾಪುರದಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರನ್ನು ಬಂಧಿಸಲಾಗಿದೆ.

-ಆರಗ ಜ್ಞಾನೇಂದ್ರ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News