ಹಸಿವಿಗಿಂತ ಜಾತಿ, ಧರ್ಮವೇ ದೊಡ್ಡದು ಎಂಬುದು ಬಿಜೆಪಿ ಸಿದ್ಧಾಂತ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಚಿಕ್ಕಮಗಳೂರು, ಡಿ.21: ದೇಶದಲ್ಲಿ ಹಸಿವಿಗಿಂತ ಜಾತಿ, ಧರ್ಮವೇ ದೊಡ್ಡದು ಎಂಬುದನ್ನು ಬಿಜೆಪಿ ದೇಶಾದ್ಯಂತ ಬಿಂಬಿಸಲು ಹೊರಟಿದೆ. ಆದರೆ ಭೂಮಿಯಲ್ಲಿ ಜಾತಿ, ಧರ್ಮವಿಲ್ಲದೇ ಬದುಕಬಹುದು ಆದರೆ ಹಸಿವಿನಿಂದ ಬದುಕಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರಿಯಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಚುನಾವಣಾ ವೀಕ್ಷಕ ಕಿಮ್ಮನೆ ರತ್ನಾಕರ್ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ ಭವನದಲ್ಲಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪಕ್ಷದ ಅಭ್ಯರ್ಥಿಗಳ ಸಭೆಯಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕೇವಲ ಪ್ರಚೋದನಾಕಾರಿ ಭಾಷಣ ಮಾಡುವುದರಿಂದ ಮತ ಪಡೆಯುವುದು ಅಸಾಧ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್‍ನ ಎಲ್ಲಾ ಅಭ್ಯರ್ಥಿಗಳು ಪರಸ್ಪರ ಒಗ್ಗಟ್ಟಾಗಿ ರೂಪುರೇಷೆಗಳ ಮೂಲಕ ನಗರಸಭೆ ಚುನಾವಣೆ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಚುನಾವಣೆಯಲ್ಲಿ ಹಣ ಹಾಗೂ ಅಧಿಕಾರದ ಬಲದ ಮೂಲಕ ಬಿಜೆಪಿ ಹುಳಿಹಿಂಡುವ ಕೆಲಸ ಮಾಡುವ ಸಂಭವವಿದೆ, ಈ ಆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಅಭ್ಯರ್ಥಿಗಳು ಒಗ್ಗಟ್ಟಾಗಿ ದ್ವೇಷ ಅಸೂಯೆಗೆ ಆಸ್ಪದ ನೀಡದಂತೆ ಚುನಾವಣೆ ಎದುರಿಸಬೇಕು. ಚಿಕ್ಕಮಗಳೂರಿನಲ್ಲಿ ಸಿ.ಟಿರವಿ 4 ಬಾರಿ ಶಾಸಕರಾಗಿದ್ದರೂ ನಗರದ ಜನತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ದತ್ತಪೀಠವನ್ನು ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಚೋದನಾಕಾರಿ ಹೇಳಿಕೆ ಮೂಲಕ ಚುನಾವಣೆ ಗೆಲ್ಲಬಹುದು ಎಂಬುದು ಅವರ ತಂತ್ರವಾಗಿದ್ದು, ಇದನ್ನು ಜಿಲ್ಲೆಯ ಜನತೆ ಬದಲಾಯಿಸಿ ಅಭಿವೃದ್ಧಿ ಯೋಜನೆಗಳನ್ನು ಆಧರಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಜನರ ಭಾವನೆಗಳನ್ನು ಅರ್ಥೈಸಿಕೊಂಡು ಚುನಾವಣೆ ಎದುರಿಸಬೇಕೆಂದರು.
ಬಿಜೆಪಿ ಅಂಬೇಡ್ಕರ್, ಗಾಂಧೀಜಿ ಹಾಗೂ ಅಲ್ಪಸಂಖ್ಯಾತರ ವಿರೋಧಿಯಾಗಿ ಕೆಲಸ ಮಾಡುತ್ತಿದೆ. ಕೇವಲ ಅಧಿಕಾರಕ್ಕಾಗಿ ಮಾತ್ರ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ದಲಿತರ ಪರ ಎಂದು ತೋರ್ಪಡಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಜಾತಿ, ಧರ್ಮದ ಮೂಲಕ ಕೋಮುದ್ವೇಷ ಉಂಟು ಮಾಡಲು ಸಂಚು ರೂಪಿಸುತ್ತಿದೆ. ಅದು ಅಧಿಕಾರಕ್ಕೆ ಬಂದಿರುವುದು ಜಾತಿ ಧರ್ಮದ ಹೆಸರಿನಲ್ಲಿಯೇ ಹೊರತು ಸರಕಾರದ ಜನಪರ ಯೋಜನಾ ಕಾರ್ಯಕ್ರಮಗಳಿಂದಲ್ಲ. ಜಿಲ್ಲೆಯಲ್ಲಿ ದತ್ತಪೀಠವಿಲ್ಲದಿದ್ದದೇ ಶಾಸಕ ಸಿ.ಟಿ.ರವಿ ಕೂಡ ಇಲ್ಲಿನ ಶಾಸಕ ಆಗುತ್ತಿರಲಿಲ್ಲ, ಬಿಜೆಪಿಯು ಇರುತ್ತಿರಲಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಯುವಜನತೆ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮಪಂಚಾಯತ್‍ಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗದೆ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗಿದೆ. ಪಂಚಾಯತ್‍ನಿಂದ ನೀಡಲಾಗುವ ಅಂಗವಿಕಲರ ವಾಹನಗಳು ಹಾಗೂ ಮನೆ ಹಂಚಿಕೆಯಲ್ಲಿ ಶಾಸಕರ ಹಸ್ತಕ್ಷೇಪವಿದೆ. ಈ ಬಗ್ಗೆ ಚರ್ಚೆ ನಡೆಸದೆ ಕೇವಲ ಜಾತಿ ಧರ್ಮದ ಆಧಾರದ ಮೇಲೆ ಚುನಾವಣೆಗೆ ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್‍ನ ಮುಖಂಡ ಐವನ್‍ಡಿಸೋಜಾ ಮಾತನಾಡಿ, ನಗರಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಇದರ ಗೆಲುವು ಇಡೀ ರಾಜ್ಯಕ್ಕೆ ಸಂದೇಶ ನೀಡಲಿದೆ. ಆ ನಿಟ್ಟಿನಲ್ಲಿ ಅಭ್ಯರ್ಥಿಗಳು ಉತ್ತಮ ಪ್ರಚಾರ ತಂತ್ರದ ಮೂಲಕ ಗೆಲುವಿಗೆ ಶ್ರಮಿಸಬೇಕು. ಅಭ್ಯರ್ಥಿಗಳು ನಗರದ ಅಭಿವೃದ್ಧಿಗಾಗಿ ಹಲವು ಸದಾಶಯಗಳನ್ನು ಹೊಂದಿದ್ದು, ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ದಗೊಂಡಿದೆ. ಇದನ್ನು ಕಾರ್ಯರೂಪಕ್ಕೆ ತರುವ ಮೂಲಕ ನಗರದ ಅಭಿವೃದ್ಧಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಮತದಾರರ ಮನವೊಲಿಸುವಂತೆ ತಿಳಿಸಿದರು.
ಮಾಜಿ ಸಚಿವ ಅಭಯ್‍ಚಂದ್ರ ಮಾತನಾಡಿ, ನಗರದ ಕೆಲವು ವಾರ್ಡ್‍ಗಳಿಗೆ ಭೇಟಿ ನೀಡಿದ ವೇಳೆ ನಗರವು ಸಂಪೂರ್ಣವಾಗಿ ಅವ್ಯವಸ್ಥೆಯಿಂದ ರಸ್ತೆಗಳು, ಒಳಚರಂಡಿ ಅಪೂರ್ಣವಾಗಿದ್ದು ಕಂಡು ಬಂದಿದೆ, ಅವ್ಯವಸ್ಥೆಗೆ ನಗರದ ಜನತೆ ಬೇಸತ್ತು ಕಾಂಗ್ರೆಸ್ ಪರವಾದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಜಾತ್ಯಾತೀತ ಸಿದ್ದಾಂತಗಳನ್ನು ಹೊಂದಿ ಎಲ್ಲಾ ವರ್ಗದವರಿಗೂ ಅವಕಾಶ ನೀಡಿದೆ ಆ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಟಿಕೆಟ್ ವಂಚಿತರು ಶ್ರಮಿಸುವಂತೆ ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಕೆ.ಪಿ. ಅಂಶುಮಂತ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಮುಖಂಡರಾದ ಎಂ.ಎಲ್.ಮೂರ್ತಿ, ಡಾ.ವಿಜಯ್‍ಕುಮಾರ್, ಎ.ಎನ್.ಮಹೇಶ್, ಎಐಸಿಸಿ ಕಾರ್ಯದರ್ಶಿ ಸಂದೀಪ್, ವಕ್ತಾರ ಹಿರೇಮಗಳೂರುಪುಟ್ಟಸ್ವಾಮಿ, ರೂಬೆನ್‍ಮೊಸಸ್. ಬಿ.ಎಚ್.ಹರೀಶ್ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.