ಕಾಡುಗೊಲ್ಲ ಸಮುದಾಯ ಎಸ್ಟಿಗೆ ಸೇರ್ಪಡೆಗೆ ಕ್ರಮ: ಸಚಿವ ಮಾಧುಸ್ವಾಮಿ
ಬೆಳಗಾವಿ, ಡಿ. 21: ಕರ್ನಾಟಕ ರಾಜ್ಯದಲ್ಲಿರುವ ಗೊಲ್ಲ ಸಮುದಾಯದ ಕಾಡುಗೊಲ್ಲ ಉಪಪಂಗಡಗಳನ್ನು ಪರಿಶಿಷ್ಟ ಪಂಡಗ(ಎಸ್ಟಿ) ಸಮುದಾಯಕ್ಕೆ ಸೇರ್ಪಡೆ ಮಾಡುವ ಸಂಬಂಧ ಪುನರ್ ಪರಿಶೀಲಿಸಲು ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಶಿವಲಿಂಗೇಗೌಡ, ಬೆಳ್ಳಿ ಪ್ರಕಾಶ್, ಪೂರ್ಣಿಮಾ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.
ಆದರೆ, ಕುಲಶಾಸ್ತ್ರಿಯ ಅಧ್ಯಯನ ವರದಿ ನೀಡಿದ್ದು, ಆ ಸಮುದಾಯದ ಮದುವೆ ಮತ್ತು ಪೂಜೆ ವಿಧಿ-ವಿಧಾನಗಳ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟಣೆ ಕೋರಿದ್ದು, ಆ ಸ್ಪಷ್ಟಣೆ ನೀಡಲು ಸರಕಾರ ಕ್ರಮ ವಹಿಸಲಿದೆ. ಅಲ್ಲದೆ, ಕೇಂದ್ರಕ್ಕೆ ಮತ್ತೊಮ್ಮೆ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಜೊತೆಗೆ ಕಾಡುಗೊಲ್ಲ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧ ಗೊಂದಲ ಏರ್ಪಟ್ಟಿದ್ದು, ಅದನ್ನು ಪರಿಹರಿಸಿ ಪೂರ್ಣ ಪ್ರಮಾಣದಲ್ಲಿ ನಿಗಮ ಅಸ್ತಿತ್ವಕ್ಕೆ ತರುವುದರ ಜೊತೆಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಶಿವಲಿಂಗೇಗೌಡ ಮತ್ತು ಪೂರ್ಣಿಮಾ, ರಾಜ್ಯದಲ್ಲಿ ಕಾಡುಗೊಲ್ಲ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗುವ ಎಲ್ಲ ಅರ್ಹತೆಗಳಿವೆ. ಆ ನಿಟ್ಟಿನಲ್ಲಿ ಕೇಂದ್ರ ಕೋರಿರುವ ಸ್ಪಷ್ಟಣೆ ನೀಡುವ ಮೂಲಕ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.