ಮೌಲಾನಾ ಆಝಾದ್ ಮಾದರಿ ವಸತಿ ಶಾಲೆಗಳ ಶಿಕ್ಷಕರ ನೇಮಕಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ, ಡಿ.21: ರಾಜ್ಯದಲ್ಲಿ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಸರಕಾರ ಒತ್ತು ನೀಡಿದೆ. 200 ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಿ ನಿರ್ವಹಿಸಲಾಗುತ್ತಿದೆ. ಈ ಶಾಲೆಗೆಳಲ್ಲಿ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲೆಗಳಿಂದ ಹೊರಗುಳಿದ ಅಲ್ಪಸಂಖ್ಯಾತರ ಮಕ್ಕಳನ್ನು ಮರಳಿ ಶಾಲೆಗೆ ತರಲು ಈಗಾಗಲೇ ಮುಚ್ಚಲ್ಪಟ್ಟ ಸರಕಾರಿ ಉರ್ದು ಶಾಲೆಗಳ ಜಾಗದಲ್ಲಿ 200 ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಹೊಸದಾಗಿ ಶಾಳೆಗಳನ್ನು ಪ್ರಾರಂಭಿಸಲು ಜನಪ್ರತಿನಿಧಿಗಳಿಂದ ಪ್ರಸ್ತಾವನೆಗಳು ಬಂದಿವೆ. ಇವುಗಳ ಕಾರ್ಯ ಸಾಧ್ಯತೆಗಳನ್ನು ಪರಿಶೀಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಮೌಲಾನಾ ಆಝಾದ್ ಮಾದರಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಅಲ್ಲಿಯವರೆಗೂ ಅತಿಥಿ ಶಿಕ್ಷಕರ ನೇಮಕದ ಮೂಲಕ ಶಾಲೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯ ಕೆ.ರಾಘವೇಂದ್ರ ಹಿಟ್ನಾಳ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಬಸವರಾಜ ಬೊಮ್ಮಾಯಿ, ಕೋವಿಡ್ ಲಾಕ್‍ಡೌನ್ ಕಾರಣದಿಂದ ಹಲವಾರು ಅನುದಾನಗಳನ್ನು ಕಡಿತಗೊಳಿಸಲಾಗಿದೆ. ಅಲ್ಪಸಂಖ್ಯಾತರ ಶಿಕ್ಷಣ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಒದಗಿಸಲಾಗುವುದು ಎಂದರು.