ಲಕ್ಷ್ಮೀ ಹೆಬ್ಬಾಳ್ಕರ್ ಸಂತೈಸಲು ಎಂಇಎಸ್ ಪರ ಡಿಕೆಶಿ ಹೇಳಿಕೆ: ಸಚಿವ ಕೆ.ಎಸ್.ಈಶ್ವರಪ್ಪ

Update: 2021-12-21 17:07 GMT

ಬೆಳಗಾವಿ, ಡಿ.21: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಹೇಳುತ್ತಾರೆ. ಆದರೆ, ಇದು ಯಾರೋ ಕಿಡಿಗೇಡಿಗಳ ಕೃತ್ಯ, ಎಂ.ಇ.ಎಸ್ ಇದರ ಹಿಂದೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಗಾರಿದರು.

ಮಂಗಳವಾರ ಅನಗೋಳದ ಕನಕದಾಸ ಕಾಲನಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲೆ ಎರಡು ಧ್ವನಿ ಇದೆ. ಅವರಲ್ಲೇ ಒಮ್ಮತವಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಂತೈಸಲು ಎಂ.ಇ.ಎಸ್ ಪರವಾಗಿ ಹೇಳಿಕೆಗಳನ್ನು ನೀಡುತ್ತಿರಬಹುದು. ಏಕೆಂದರೆ, ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಮುಕ್ಕಾಲು ಭಾಗ ಎಂ.ಇ.ಎಸ್ ಬೆಂಬಲ ಪಡೆಯಲು ಡಿ.ಕೆ.ಶಿವಕುಮಾರ್ ಈ ಆಟ ಆಡಿರಬಹುದು ಎಂದು ಈಶ್ವರಪ್ಪ ಆರೋಪಿಸಿದರು.

ಈ ದುಷ್ಕøತ್ಯ ಮಾಡಿದವರು ಮಹಾರಾಷ್ಟ್ರ ಹೇಡಿಗಳ ಸಮಿತಿಯವರು. ಇದರಿಂದಾಗಿ, ಇಡೀ ಕರ್ನಾಟಕ ಜನತೆಗೆ ನೋವಾಗಿದೆ. ಹಗಲು ಹೊತ್ತು ಬಂದು ಈ ರೀತಿ ಮಾಡಿದ್ದರೆ ಕನ್ನಡಿಗರು ಅವರನ್ನ ಚಿಂದಿ ಚಿಂದಿ ಮಾಡುತ್ತಿದ್ದರು. ಈ ಕೃತ್ಯಗಳ ಹಿಂದೆ ಯಾರಿದ್ದಾರೆ, ಯಾವುದಾದರೂ ಸಂಘ, ಸಂಸ್ಥೆಗಳು, ರಾಜಕೀಯ ನಾಯಕರು ಇದ್ದಾರೆಯೇ ಅನ್ನೋ ಎಲ್ಲ ಅಂಶಗಳು ತನಿಖೆ ವೇಳೆ ಹೊರ ಬರುತ್ತವೆ ಎಂದು ಅವರು ಹೇಳಿದರು.

ಎಂ.ಇ.ಎಸ್ ದುಷ್ಕೃತ್ಯದ ವಿರುದ್ಧ ನಿನ್ನೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದ ಖಂಡನಾ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದೇವೆ. ಎಂ.ಇ.ಎಸ್ ನಿಷೇಧ ಮಾಡಬೇಕೆಂಬ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೂ ತರುತ್ತೇವೆ. ಇಂತಹ ದುಷ್ಕ್ರತ್ಯ ಮಾಡಿದವರನ್ನ ಗುಂಡಿಕ್ಕಿ ಕೊಲ್ಲಬೇಕು ಎಂದು ನಿನ್ನೆ ವಿಧಾನಸಭೆಯಲ್ಲೂ ಹೇಳಿದ್ದೀನಿ. ಈಗಲೂ ಹೇಳುತ್ತಿದ್ದೇನೆ ಎಂದು ಈಶ್ವರಪ್ಪ ಪುನರುಚ್ಚರಿಸಿದರು.

ಉತ್ತರ ಪ್ರದೇಶದಲ್ಲಿ ದೇಶದ್ರೋಹಿಗಳನ್ನ, ಗೂಂಡಾ ಚಟುವಟಿಕೆ ಮಾಡೋರನ್ನ ಯೋಗಿ ಆದಿತ್ಯನಾಥ್ ಅವರ ಸರಕಾರ ಅಲ್ಲೇ ಶೂಟ್ ಆಟ್ ಸೈಟ್ ಮಾಡಿದೆ. ಹೀಗಾಗಿ ಉತ್ತರಪ್ರದೇಶದ ಶಾಂತವಾಗಿದೆ ಎಂದು ನಿನ್ನೆ ಸದನದಲ್ಲಿ ಅವರು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿ ಭಾವನಾತ್ಮಕವಾಗಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಕ್ಷೇತ್ರದ ಜನರಿಗೆ ಹೇಳಿದ ಮಾತು. ಇದು ದೊಡ್ಡದು ಮಾಡೋದು ಅಗತ್ಯವಿಲ್ಲ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸೋಲು, ಈ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ನಾನು ಸೋತಿದ್ದೇನೆ, ಗೆದ್ದಿದ್ದೇನೆ. ಗೆದ್ದಾಗ ಸಹಕಾರ ಕೊಟ್ಟಿದ್ದಾರೆ, ಸೋತಾಗ ಸಹಕಾರ ಕೊಟ್ಟಿಲ್ಲ ಎಂದು ಹೇಳೊದು ಒಳ್ಳೆಯದಲ್ಲ ಎಂದರು.

ಜನವರಿಯಲ್ಲಿ ರಾಜ್ಯ ರಾಜಕೀಯದಲ್ಲಿ ಎಲ್ಲ ಬದಲಾವಣೆ ಆಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈ ಸಂಬಂಧ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೆ ಕೇಳಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News