ರಾಜ್ಯದಲ್ಲೂ ಮೈ ನಡುಗುವ ಚಳಿ: ಬೀದರ್‌ನಲ್ಲಿ 9.4 ಡಿಗ್ರಿ ತಾಪಮಾನ
ಬೆಂಗಳೂರು: ಸುಧೀರ್ಘ ಮಳೆಗಾಲದ ಬಳಿಕ ರಾಜ್ಯದಲ್ಲಿ ಇದೀಗ ತೀವ್ರ ಚಳಿ ಆರಂಭವಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡು ಕರ್ನಾಟಕದ ಬಯಲು ಪ್ರದೇಶಗಳಲ್ಲಿ ತಾಪಮಾನ ಗಣನೀಯವಾಗಿ ಇಳಿದಿದೆ. ಬೀದರ್‌ನಲ್ಲಿ 85 ವರ್ಷಗಳಲ್ಲೇ ಕನಿಷ್ಠ ಎನಿಸಿದ 9.7 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ಸೋಮವಾರ ದಾಖಲಾಗಿತ್ತು. ಮಂಗಳವಾರ ಇದು 9.4 ಡಿಗ್ರಿಗೆ ಕುಸಿದಿದೆ. 1936ರಲ್ಲಿ ಬೀದರ್‌ನಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು.
"ಬೀದರ್‌ನಲ್ಲಿ ಮಾತ್ರವಲ್ಲದೇ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಬಯಲು ಪ್ರದೇಶಗಳಲ್ಲಿ ಇದೇ ಪರಿಸ್ಥಿತಿ ಇದೆ. ದಿನ ಕಳೆದಂತೆ ಬೀದರ್‌ನಲ್ಲಿ ತಾಪಮಾನ ಮತ್ತಷ್ಟು ಕುಸಿಯುತ್ತಿದೆ" ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬಿಜಾಪುರದಲ್ಲಿ 10.4 ಡಿಗ್ರಿ, ಧಾರವಾಡ ಹಾಗೂ ದಾವಣಗೆರೆಯಲ್ಲಿ ಕ್ರಮವಾಗಿ 10.8 ಡಿಗ್ರಿ ಹಾಗೂ 10.9 ಡಿಗ್ರಿ ತಾಪಮಾನ ದಾಖಲಾಗಿದೆ. ಈ ಮಟ್ಟಕ್ಕೆ ತಾಪಮಾನ ಕುಸಿದಿರುವುದು ಕೆಲ ದಶಕಗಳಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಒಣಹವೆ ಪರಿಸ್ಥಿತಿ ಮುಂದಿನ ನಾಲ್ಕೈದು ದಿನ ಮುಂದುವರಿಯಲಿದೆ. ಆ ಬಳಿಕ ತಾಪಮಾನ ವ್ಯತ್ಯಯವಾಗಲಿದೆ. ಒಂದು ದಿನ ಕುಸಿದು ಮರುದಿನ ಹೆಚ್ಚುವ ಸಾಧ್ಯತೆ ಇದೆ. ಇದುವರೆಗೆ ಯಾವುದೇ ವೈಪರೀತ್ಯದ ಸೂಚನೆ ಕಾಣಿಸುತ್ತಿಲ್ಲ ಎಂದು ಬೆಂಗಳೂರಿನ ಹವಾಮಾನ ತಜ್ಞ ಸದಾನಂದ ಅಡಿಗ ಹೇಳಿದ್ದಾರೆ.
ಬೀದರ್‌ನಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ 6 ಡಿಗ್ರಿಯಷ್ಟು ಕಡಿಯೆಯಾಗಿದ್ದರೆ, ಹಾಸನದಲ್ಲೂ ಇಂಥದ್ದೇ ಕುಸಿತ ಕಂಡುಬಂದಿದೆ ಎಂದು ವಿವರಿಸಿದ್ದಾರೆ.
ಸುಧೀರ್ಘ ಮಳೆಗಾಲದ ಬಳಿಕ ಹವಾಮಾನ ಪರಿಸ್ಥಿತಿ ಕಳೆದ ವಾರ ರಾಜ್ಯದಲ್ಲಿ ಬದಲಾಗಿತ್ತು. ಡಿಸೆಂಬರ್ 16ರಂದು ರಾಜ್ಯದ ಎಲ್ಲೆಡೆ ಹವಾಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಇದು ಚಳಿಗಾಲ ಆರಂಭವಾಗುತ್ತಿರುವ ಸೂಚನೆ ಎಂದು ಅಡಿಗ ಹೇಳಿದ್ದಾರೆ.
ಬೆಂಗಳೂರಿನಲ್ಲೂ ಡಿಸೆಂಬರ್ 2ನೇ ವಾರದಿಂದ ಚಳಿಯ ಅನುಭವ ಆಗುತ್ತಿದೆ. ಮಂಗಳವಾರ ನಗರದ ಕನಿಷ್ಠ ತಾಪಮಾನ 16 ಡಿಗ್ರಿ ಇತ್ತು. ವಾರಾಂತ್ಯದ ವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.