ಅರ್ಧ ವರ್ಷ ಕಳೆದರೂ ಶಾಲೆಗಳಿಗೆ ತಲುಪದ ಪಠ್ಯಪುಸ್ತಕ !
ಬೆಂಗಳೂರು: ರಾಜ್ಯದಲ್ಲಿ ಶೈಕ್ಷಣಿಕ ವರ್ಷದ ಅರ್ಧ ಭಾಗ ಕಳೆದರೂ ರಾಜ್ಯ ಶಿಕ್ಷಣ ಮಂಡಳಿಯ ಸಂಲಗ್ನತ್ವ ಪಡೆದಿರುವ ಹಲವು ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ತಲುಪಿಲ್ಲ. ಈ ಪೈಕಿ ಕೆಲ ಶಾಲೆಗಳು ಸಾಕಷ್ಟು ಮುಂಚಿತವಾಗಿಯೇ ಸಂಪೂರ್ಣ ಹಣವನ್ನು ಪಾವತಿಸಿ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿವೆ. ಇಷ್ಟಾಗಿಯೂ ಖಾಸಗಿ ಅನುದಾನರಹಿತ ಶಾಲೆಗಳಿಗೆ ಪುಸ್ತಕ ದೊರಕಿಲ್ಲ.
ಖಾಸಗಿ ಶಾಲೆಗಳಿಗೆ ಇನ್ನೂ ಇಂಗ್ಲಿಷ್ ಮತ್ತು ಗಣಿತ ಪಠ್ಯಗಳು ಸಿಕ್ಕಿಲ್ಲ ಎಂದು ಉನ್ನತ ಮೂಲಗಳು ಹೇಳಿವೆ. ಕನ್ನಡವನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಕಾಯ್ದೆ ಜಾರಿಗೆ ತಂದಿದ್ದರೂ, ಕನ್ನಡ ಪಠ್ಯಪುಸ್ತಕಗಳು ಕೂಡಾ ವಿದ್ಯಾರ್ಥಿಗಳ ಕೈಸೇರಿಲ್ಲ.
ರಾಜ್ಯದ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳ ಬಗ್ಗೆ ಮಾತ್ರ ಗಮನ ಹರಿಸಿದ್ದು, ಖಾಸಗಿ ಶಾಲೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ದೂರಿವೆ.
"ಕಾರ್ಯಾದೇಶಗಳನ್ನು ಪಡೆದುಕೊಳ್ಳುವಾಗಲೇ ಸಂಪೂರ್ಣ ಮೊತ್ತವನ್ನು ಪಾವತಿಸುವಂತೆ ಇಲಾಖೆ ಸೂಚಿಸಿತ್ತು. ಆದರೆ ಇಂದಿನವರೆಗೂ ಬಹುತೇಕ ಶಾಲೆಗಳಿಗೆ ಕೆಲ ಪಠ್ಯಗಳು ತಲುಪಿಲ್ಲ" ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್ ಹೇಳಿದ್ದಾರೆ.
ಕಡ್ಡಾಯ ಕಲಿಕಾ ಕಾಯ್ದೆಯಡಿ ಆರಂಭಿಸಿರುವ ಕನ್ನಡ ಭಾಷೆಯ ಪಠ್ಯಪುಸ್ತಕಗಳು ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿಗೂ ಬಂದಿಲ್ಲ ಎಂದು ಆಡಳಿತ ಮಂಡಳಿಗಳು ದೂರಿವೆ. ಕೆಲ ಖಾಸಗಿ ಶಾಲೆಗಳಲ್ಲಿ ಪಠ್ಯಪುಸ್ತಕ ಸಿಗದೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋಧಿಸಲೂ ಪರದಾಡುತ್ತಿವೆ. "ಇತರ ಶಾಲೆಗಳ ವಿದ್ಯಾರ್ಥಿಗಳು ಪಡೆದ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಪಡೆದು ಬೋಧನೆ ಮಾಡುತ್ತಿದ್ದೇವೆ" ಎಂದು ಬೆಂಗಳೂರಿನ ಖಾಸಗಿ ಶಾಲೆಯೊಂದರ ಪ್ರಾಚಾರ್ಯರು ತಿಳಿಸಿದ್ದಾರೆ.
ಲಾಕ್‌ಡೌನ್ ಕಾರಣದಿಂದ ಪಠ್ಯಪುಸ್ತಕ ಮುದ್ರಣದಲ್ಲಿ ವಿಳಂಬವಾಗಿದೆ. ಶಾಲಾ ತರಗತಿ ಆರಂಭದ ಮೊದಲ ದಿನವೇ ಪಠ್ಯ ವಿತರಣೆಗೆ ಇಲಾಖೆ ಯೋಜನೆ ರೂಪಿಸಿತ್ತಾದರೂ ಸಾಂಕ್ರಾಮಿಕದ ಸ್ಥಿತಿಯಿಂದಾಗಿ ಇದು ಸಾಧ್ಯವಾಗಿಲ್ಲ. ರಾಜ್ಯ ಬಜೆಟ್‌ನಲ್ಲಿ ಪಠ್ಯಪುಸ್ತಕ ವಿತರಣೆಗಾಗಿ ಸರ್ಕಾರ 153 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿತ್ತು.
ಇಲಾಖೆ ಕಡೆಯಿಂದ ಪಠ್ಯಪುಸ್ತಕ ವಿತರಣೆಯಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. "ಕಾರ್ಯಾದೇಶಕ್ಕಾಗಿ ಕೇಳಿದಾಗ ಬಹುತೇಕ ಖಾಸಗಿ ಶಾಲೆಗಳು, ಕಳೆದ ವರ್ಷದ ಪುಸ್ತಕಗಳು ಬಾಕಿ ಇವೆ ಎಂಬ ಕಾರಣಕ್ಕೆ ಶೇಕಡ 65ರಷ್ಟು ಪುಸ್ತಕಗಳಿಗೆ ಮಾತ್ರ ಬೇಡಿಕೆ ಸಲ್ಲಿಸಿದ್ದವು. ಬಳಿಕ ಹೆಚ್ಚುವರಿ ಶೇಕಡ 15ರಷ್ಟು ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿವೆ. ಇವುಗಳ ಮುದ್ರಣ ಪ್ರಕ್ರಿಯೆ ನಡೆಯುತ್ತಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ 15 ದಿನಗಳಲ್ಲಿ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕಗಳು ತಲುಪಲಿವೆ ಎಂದು ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಸ್ಪಷ್ಟಪಡಿಸಿದ್ದಾರೆ.