ವಿಧಾನಸಭೆ ಆವರಣ ಪ್ರವೇಶಿಸಲು ಮಾಧ್ಯಮಗಳಿಗೆ ನಿರ್ಬಂಧ: ನಾನು ನಿರ್ದೇಶನ ಮಾಡಿಲ್ಲ ಎಂದ ಸ್ಪೀಕರ್ ಕಾಗೇರಿ
Update: 2021-12-22 13:06 IST
ಬೆಳಗಾವಿ: ಸುವರ್ಣ ವಿಧಾನಸೌಧ ಲಾಂಜ್ ಗೆ ತೆರಳಲು ಸ್ಪೀಕರ್ ಕಚೇರಿ ಸೂಚನೆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿ ವಾಹಿನಿ ಕ್ಯಾಮರಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿ ವರದಿಗಾರರು ಕ್ಯಾಮರಗಳೊಂದಿಗೆ ಸುವರ್ಣವಿಧಾನಸೌಧ ಗೇಟ್ ನಲ್ಲಿ ಪ್ರತಿಭಟನೆ ನಡೆಸಿದ್ದು, ‘ನನ್ನ ಕಡೆಯಿಂದ ಯಾವುದೇ ನಿರ್ದೇಶನ ಆಗಿಲ್ಲ' ಎಂದು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆಯ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನನ್ನ ಕಡೆಯಿಂದ ಯಾವುದೇ ನಿರ್ದೇಶನ ಆಗಿಲ್ಲ. ನಾನು ಮಾಧ್ಯಮಗಳ ನಿರ್ಬಂಧ ಕುರಿತು ಯಾವುದೇ ನಿರ್ದೇಶನ ಮಾಡಿಲ್ಲ' ಎಂದು ಹೇಳಿದ್ದಾರೆ.
ಪ್ರತಿಭಟನೆ ಕೈ ಬಿಟ್ಟ ಪತ್ರಕರ್ತರು:
ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟನೆ ಬಳಿಕ ಬೆಳಗಾವಿ ಎಸ್ ಪಿ ಅವರು ಈ ರೀತಿಯ ನಿರ್ದೇಶನ ನೀಡಿರುವ ಬಗ್ಗೆ ತಿಳಿದು ಪತ್ರಕರ್ತರು ತಮ್ಮ ಪ್ರತಿಭನಟನೆಯನ್ನು ವಾಪಸ್ ಪಡೆದುಕೊಂಡಿದ್ದಾರೆ.