ಭಾರಿ ವಾಹನ ಚಾಲನ ತರಬೇತಿ ಕೇಂದ್ರ ಆರಂಭಿಸಲು ಕ್ರಮ: ಸಚಿವ ಕಾರಜೋಳ

Update: 2021-12-22 10:30 GMT

ಬೆಳಗಾವಿ, ಡಿ. 22: ಮಂಗಳೂರಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂಬಳಪದವು ಪ್ರದೇಶದಲ್ಲಿನ ಭಾರಿ ವಾಹನ ಚಾಲನ ತರಬೇತಿ ಕೇಂದ್ರವನ್ನು ತ್ವರಿತಗತಿಯಲ್ಲಿ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಪರವಾಗಿ ಸಚಿವ ಗೋವಿಂದ ಕಾರಜೋಳ ಸದನಕ್ಕೆ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನಲ್ಲಿ ಸ್ಥಾಪಿಸಲಾಗಿರುವ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರ 2021ರ ಜನವರಿಯಲ್ಲಿ ಉದ್ಘಾಟನೆಗೊಂಡಿದೆ. ಆದರೆ, ಸದರಿ ತರಬೇತಿ ಕೇಂದ್ರದ ನಿರ್ವಹಣೆ ಸಂಬಂಧ ಎರಡು ಬಾರಿ ಟೆಂಡರ್ ಆಹ್ವಾನಿಸಿದ್ದು ಯಾವುದೆ ಬಿಡ್ಡುದಾರರು ಬಂದಿಲ್ಲ.

ಹೀಗಾಗಿ ರಾಜ್ಯ ಸರಕಾರದ ವತಿಯಿಂದಲೇ ಕಾರ್ಯಾಚರಣೆಗೊಳಿಸಲು ತೀರ್ಮಾನಿಸಿದ್ದು, ಈ ಸಂಬಂಧ ಸಮಿತಿ ರಚನೆ ಮಾಡಿ ತ್ವರಿತಗತಿಯಲ್ಲಿ ಭಾರಿ ವಾಹನ ಚಾಲನಾ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಕಾರಜೋಳ ತಿಳಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯ ಯು.ಟಿ.ಖಾದರ್, ಕಟ್ಟಡ ಉದ್ಘಾಟನೆಗೊಂಡು ವರ್ಷ ಕಳೆಯುತ್ತಿದೆ. ವಾಹನ ಚಾಲನ ತರಬೇತಿ ಕೇಂದ್ರ ಕಾರ್ಯಾರಂಭ ಮಾಡಿದ್ದರೆ ಕಟ್ಟಡ ಅನುಪಯುಕ್ತವಾಗಲಿದೆ. ಆದುದರಿಂದ ಕೂಡಲೇ ತರಬೇತಿ ಕೇಂದ್ರ ಆರಂಭಿಸಬೇಕು. ಜೊತೆಗೆ ಪಕ್ಕದಲ್ಲೆ ಇರುವ ಜಾಗದಲ್ಲಿ ಲಘು ವಾಹನ ಚಾಲನ ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕೆಂದು ಕೋರಿದರು. ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕಾರಜೋಳ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News