ನಮ್ಮನ್ನು ಹಾಸನ ವಿಭಾಗಕ್ಕೆ ಸೇರಿಸಿ, ಇಲ್ಲವೇ ಅಧಿಕಾರಿಗಳನ್ನು ಕಳುಹಿಸಿಕೊಡಿ: ಜೆಡಿಎಸ್ ಶಾಸಕರ ಒತ್ತಾಯ

Update: 2021-12-22 12:00 GMT
ಫೈಲ್ ಚಿತ್ರ

ಬೆಳಗಾವಿ, ಡಿ. 22: ಸಕಲೇಶಪುರ, ಅರಸಿಕೆರೆ ಮತ್ತು ಬೇಲೂರು ವಿಭಾಗವನ್ನು ಚಿಕ್ಕಮಗಳೂರು ಸಾರಿಗೆ ವಿಭಾಗದಿಂದ ಹಾಸನ ಸಾರಿಗೆ ವಿಭಾಗಕ್ಕೆ ಸೇರ್ಪಡೆ ಮಾಡಬೇಕು ಎಂದು ಜೆಡಿಎಸ್‍ನ ಎಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ ಹಾಗೂ ಕೆ.ಎಸ್. ಲಿಂಗೇಶ್ ಆಗ್ರಹಿಸಿದ ಘಟನೆ ನಡೆಯಿತು.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಎಚ್.ಕೆ.ಕುಮಾರಸ್ವಾಮಿ, ಸಕಲೇಶಪುರ ವಿಭಾಗಕ್ಕೆ ಸಾರಿಗೆ ಇಲಾಖೆ ಯಾವ ಅಧಿಕಾರಿಯೂ ಬರುವುದಿಲ್ಲ. ಆಡಳಿತಾತ್ಮಕ ಕಾರಣಗಳಿಗಾಗಿ ಚಿಕ್ಕಮಗಳೂರು ವಿಭಾಗಕ್ಕೆ ಸೇರಿಸಿದ್ದು, ಇದರಿಂದ ಸಾರ್ವಜನಿಕ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ನಮ್ಮನ್ನು ಹಾಸನ ವಿಭಾಗಕ್ಕೆ ಸೇರ್ಪಡೆ ಮಾಡಿ. ಇಲ್ಲವೆ ಅಧಿಕಾರಿಗಳನ್ನು ಸಕಲೇಶಪುರ ವಿಭಾಗಕ್ಕೆ ಕಳುಹಿಸಿಕೊಡಿ ಎಂದು ಆಗ್ರಹಿಸಿದರು. 

ಇದಕ್ಕೆ ಧ್ವನಿಗೂಡಿಸಿದ ಬೇಲೂರು ಕ್ಷೇತ್ರದ ಸದಸ್ಯ ಕೆ.ಎಸ್.ಲಿಂಗೇಶ್ ಮತ್ತು ಅರಸೀಕೆರೆ ಕ್ಷೇತ್ರದ ಹಿರಿಯ ಸದಸ್ಯ ಕೆ.ಎಂ.ಶಿವಲಿಂಗೇಗೌಡ, ನಮ್ಮ ಎರಡೂ ಕ್ಷೇತ್ರಕ್ಕೂ ಸಾರಿಗೆ ಅಧಿಕಾರಿಗಳು ಬರುವುದಿಲ್ಲ. ಹೀಗಾಗಿ ನಮ್ಮನ್ನು ಹಾಸನ ವಿಭಾಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಸಚಿವ ಕಾರಜೋಳ, ಹಾಸನ ವಿಭಾಗವನ್ನು ವಿಭಜನೆ ಮಾಡಿ 2000ನೆ ಇಸವಿಯಲ್ಲಿ ಚಿಕ್ಕಮಗಳೂರು ವಿಭಾಗಕ್ಕೆ ಸಕಲೇಶಪುರ ಸೇರಿಸಲಾಗಿದೆ. ಈಗಾಗಲೇ 21 ವರ್ಷ ಕಳೆದಿದ್ದು ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಸಕಲೇಶಪುರ ಹಾಸನ ವಿಭಾಗಕ್ಕೆ ಸೇರಿಸುವ ಪ್ರಶ್ನೆ ಇಲ್ಲ.

ಆದರೆ, ಏನು ಅಧಿಕಾರಿಗಳು ಸಕಲೇಶಪುರ ವಿಭಾಗಕ್ಕೆ ಬರುವುದಿಲ್ಲ ಎಂದು ಸದಸ್ಯರು ಗಮನ ಸೆಳೆದಿದ್ದಾರೆ. ತಕ್ಷಣವೇ ಅಧಿಕಾರಿಗಳು ಸಕಲೇಶಪುರ ಸಾರಿಗೆ ವಿಭಾಗಕ್ಕೆ ಪ್ರತಿವಾರ ತೆರಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News