×
Ad

ಚಿಕ್ಕಮಗಳೂರು: ದತ್ತಜಯಂತಿಯ ಶೋಭಾ ಯಾತ್ರೆಯಲ್ಲಿ ಹೊಡೆದಾಟ: ಕಾಲೇಜು ವಿದ್ಯಾರ್ಥಿಗೆ ಗಂಭೀರ ಗಾಯ

Update: 2021-12-22 21:35 IST
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಡಿ.22: ಹಾಡು ಹಗಲೇ ಲಾಂಗ್ ಹಿಡಿದು ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಯುವಕರ ಗುಂಪೊಂದು ದಾಳಿ ನಡೆಸಿರುವ ಘಟನೆ ನಗರದ ಬೇಲೂರು ರಸ್ತೆಯಲ್ಲಿ ಮಂಗಳವಾರ ಸಂಜೆ ವರದಿಯಾಗಿದೆ.

ನಗರದ ಕೆಂಪನಹಳ್ಳಿ ಬಡಾವಣೆ ನಿವಾಸಿ ಆಕಾಶ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ಆಕಾಶ್‍ನನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ 6 ಯುವಕರ ಗುಂಪು ವಿದ್ಯಾರ್ಥಿ ಆಕಾಶ್ ಮೇಲೆ ದಾಳಿ ಮಾಡಿದ್ದರಿಂದ ತಲೆ ಸೇರಿದಂತೆ ಇತರ ಭಾಗಳಿಗೆ ಗಂಭೀರ ಗಾಯಗಳಾಗಿವೆ.

ದಾಳಿನಡೆಸಿದ ಗುಂಪು ಅಲ್ಲಿಂದ ಪರಾರಿಯಾಗಿದ್ದು, ಕೂಡಲೇ ಗಂಭೀರವಾಗಿ ಗಾಯಾಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು ವೆನ್‍ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ದತ್ತಜಯಂತಿಯ ಶೋಭಾಯಾತ್ರೆ ಸಂದರ್ಭದಲ್ಲಿ ಕಾಲೇಜು ಯುವಕ ಮತ್ತು ಹಲ್ಲೆ ಮಾಡಿದ ಯುವಕರ ಗುಂಪಿನ ನಡುವೆ ನಡೆದ ಮನಸ್ತಾಪದ ಜಿದ್ದಿನಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಭಂಧಿತರ ಪೈಕಿ ಓರ್ವನನ್ನು ಹೊರತುಪಡಿಸಿ ಉಳಿದವರು ಅಪ್ರಾಪ್ತರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News