ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ತಾರತಮ್ಯ: ಎಚ್.ಡಿ.ಕುಮಾರಸ್ವಾಮಿ

Update: 2021-12-22 16:27 GMT

ಬೆಳಗಾವಿ, ಡಿ.22: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರಕಾರಗಳು ನಿರಂತರವಾಗಿ ತಾರತಮ್ಯ ಅನುಸರಿಸುತ್ತಿವೆ. ಇತ್ತೀಚೆಗೆ ಕೇಂದ್ರ ಸರಕಾರದ ಸಚಿವ ಸಂಪುಟದಲ್ಲಿ ನೀರಾವರಿ ಯೋಜನೆಗಳಿಗೆ 93 ಸಾವಿರ ಕೋಟಿ ರೂ.ಬಿಡುಗಡೆ ಮಾಡಲು ಮಂಜೂರಾತಿ ನೀಡಿತ್ತು. ಆದರೆ, ಅದರಲ್ಲಿ ನಮ್ಮ ರಾಜ್ಯದ ಬಗ್ಗೆ ಉಲ್ಲೇಖವೇ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ವಿಧಾನಸಭೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಹಾಗೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುಂಠಿತವಾಗಿರುವ ಕುರಿತು ನಿಯಮ 69ರ ಮೇರೆಗೆ ನಡೆದ ಸಾರ್ವಜನಿಕ ಮಹತ್ವದ ವಿಷಯದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೃಷ್ಣಾ ನ್ಯಾಯಾಧೀಕರಣವು ನದಿ ಹಂಚಿಕೆ ಕುರಿತು 2013ರಲ್ಲಿ ಐತೀರ್ಪು ನೀಡಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ನ್ಯಾಯಾಧೀಕರಣವು ನಮ್ಮ ರಾಜ್ಯಕ್ಕೆ 132 ಟಿಎಂಸಿ ನೀರು ಹಂಚಿಕೆ ಮಾಡಿ, ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60 ರಿಂದ 524.256 ಮೀಟರ್‍ಗೆ ಎತ್ತರಿಸಲು ಅವಕಾಶ ನೀಡಿದೆ. ಆದರೆ, 9 ವರ್ಷ ಆದರೂ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ ಎಂದು ಅವರು ಹೇಳಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಪಕ್ಷದ ಸರಕಾರವೇ ಅಧಿಕಾರದಲ್ಲಿದೆ. ಬಿಜೆಪಿಯವರು ಮನಸ್ಸು ಮಾಡಿದರೆ ಗೆಜೆಟ್ ನೋಟಿಫಿಕೇಷನ್ ಮಾಡಲು ಯಾವುದೆ ಸಮಸ್ಯೆಯಿಲ್ಲ. ಈ ಯೋಜನೆಗಾಗಿ 20 ಗ್ರಾಮಗಳ ಪುನರ್ ವಸತಿ ಹಾಗೂ ಕಾಲುವೆ ಜಾಲ ನಿರ್ಮಾಣ ಮಾಡಲು 1.34 ಲಕ್ಷ ಎಕರೆ ಭೂಮಿ ಬೇಕು. ಆದರೆ, ಈವರೆಗೆ ಸರಕಾರ ಸ್ವಾಧೀನ ಮಾಡಿಕೊಂಡಿರುವುದು ಕೇವಲ 22,309 ಎಕರೆ ಮಾತ್ರ ಎಂದು ಕುಮಾರಸ್ವಾಮಿ ತಿಳಿಸಿದರು.

14.62 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಈ ಯೋಜನೆಯಡಿಯಲ್ಲಿ, 9 ಉಪ ಯೋಜನೆಯ ಕಾರ್ಯಕ್ರಮಗಳು ಇವೆ. ಸರಕಾರ ಈ ವೇಗದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸಿದರೆ ಇನ್ನೂ ಎಷ್ಟು ವರ್ಷಗಳ ಕಾಲ ಸಮಯ ಬೇಕಾಗುತ್ತದೆ. ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಮಾಡದಿದ್ದರೆ ಈ ಯೋಜನೆಯ ವೆಚ್ಚ ಮತ್ತಷ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲಿ 18 ಸಾವಿರ ಕೋಟಿ ರೂ.ಗಳಿದ್ದ ಈ ಯೋಜನಾ ವೆಚ್ಚವು 52 ಸಾವಿರ ಕೋಟಿ ರೂ. ಪರಿಷೃತ ಅಂದಾಜು ಆಗಿದೆ. ಆದರೆ, ಈವರೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾರ್ಯಕ್ರಮಗಳಿಗೆ ಸರಕಾರಗಳು ಖರ್ಚು ಮಾಡಿರುವುದು ಕೇವಲ 13,320 ಕೋಟಿ ರೂ.ಗಳು ಮಾತ್ರ. 2013ರಲ್ಲಿ ಕಾಂಗ್ರೆಸ್‍ನವರು ‘ಕಾಂಗ್ರೆಸ್ ನಡಿಗೆ, ಕೃಷ್ಣೆಯ ಕಡೆಗೆ’ ಎಂದು ಪಾದಯಾತ್ರೆ ಮಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ 10 ಸಾವಿರ ಕೋಟಿ ರೂ.ಖರ್ಚು ಮಾಡುವುದಾಗಿ ಹೇಳಿದ್ದರು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಎಂ.ಬಿ.ಪಾಟೀಲ್, ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಖರ್ಚು ಮಾಡುವುದಾಗಿ ನಾವು ಹೇಳಿದ್ದೆವು. ಅದರಂತೆ, ಐದು ವರ್ಷಗಳಲ್ಲಿ 58 ಸಾವಿರ ಕೋಟಿ ರೂ.ಬಿಡುಗಡೆ ಮಾಡಿ, 48 ಸಾವಿರ ಕೋಟಿ ರೂ.ಖರ್ಚು ಮಾಡಿದ್ದೇವೆ ಎಂದರು.

ಕಾಂಗ್ರೆಸ್ ಹಿರಿಯ ಸದಸ್ಯ ಡಾ.ಜಿ.ಪರಮೇಶ್ವರ್ ಮಾತನಾಡಿ, ನಮ್ಮ ಪಾದಯಾತ್ರೆ ಕೂಡಲಸಂಗಮ ಪ್ರವೇಶಿಸಿದಾಗ ನಾವು ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಬಿಡುಗಡೆ ಮಾಡುವುದಾಗಿ ನಾನು ಹಾಗೂ ಸಿದ್ದರಾಮಯ್ಯ ಪ್ರಮಾಣ ಮಾಡಿದ್ದು ನಿಜ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ರೂ.ಬಿಡುಗಡೆ ಮಾಡುತ್ತೇವೆ ಎಂದು ಹೇಳಿಲ್ಲ. ಇದು ತಪ್ಪು ಗ್ರಹಿಕೆ. ನಮ್ಮ ಪ್ರಮಾಣದಂತೆ ಐದು ವರ್ಷದಲ್ಲಿ 50 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಮೊತ್ತ ಬಿಡುಗಡೆ ಮಾಡಿದ್ದೇವೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಖರ್ಚು ಮಾಡುವುದಾಗಿ ಹೇಳಿದ್ದರು ಎಂದು ಓದಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂ.ಬಿ.ಪಾಟೀಲ್, ಅದು ತಪ್ಪಾಗಿದೆ, ನಮ್ಮ ಬಳಿಯೂ ಪ್ರಣಾಳಿಕೆಯ ಪ್ರತಿ ಇದ್ದು ಅದನ್ನು ನಾಳೆ ನೀಡುತ್ತೇನೆ ಎಂದರು.

ನಂತರ ಮಾತು ಮುಂದುವರೆಸಿದ ಕುಮಾರಸ್ವಾಮಿ, ಹಿಂದಿನ ಸರಕಾರ ಐದು ವರ್ಷಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಖರ್ಚು ಮಾಡಿದ್ದು 8076 ಕೋಟಿ ರೂ.ಗಳು. ಈವರೆಗೆ ಒಟ್ಟು 13,320 ಕೋಟಿ ರೂ.ಗಳನ್ನು ಮೂರನೆ ಹಂತದ ಯೋಜನೆಗೆ ವೆಚ್ಚಾಗಿದೆ. ಆದರೆ, ಆರ್ ಅಂಡ್ ಆರ್ ಆಗಿಲ್ಲ. ರೈತನ ಹೊಲಕ್ಕೆ ಒಂದೇ ಒಂದು ಹನಿ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಆಂಧ್ರಪ್ರದೇಶದ ಆಕ್ಷೇಪಣೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲು ಮತ್ತೆ ವಿಳಂಬ ಆಗುತ್ತಿದೆ. ಬಿಜೆಪಿ ಸರಕಾರ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸಮ್ಮಿತಿಸಿದೆ ಎಂದು ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿದ್ದನ್ನು ಗಮನಿಸಿದ್ದೇನೆ ಎಂದು ಅವರು ಹೇಳಿದರು.
 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News