ಜಾತಿಪದ್ಧತಿ ಮುನ್ನಡೆಸಲು ಮತಾಂತರ ನಿಷೇಧ ವಿದೇಯಕ: ಸಿಪಿಎಂ ಖಂಡನೆ
ಬೆಂಗಳೂರು, ಡಿ.22: ಆಳುವ ವರ್ಗಗಳು ತಾವು ಬಯಸಿದಾಗ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು ಹಾಗೂ ವಂಚಕ ಜಾತಿಪದ್ಧತಿಯನ್ನು ಮುನ್ನಡೆಸಲು ಮತಾಂತರ ನಿಷೇಧ ವಿದೇಯಕವನ್ನು ಮಂಡಿಸಲಾಗಿದೆ ಎಂದು ಸಿಪಿಎಂನ ರಾಜ್ಯ ಸಮಿತಿಯ ಕಾರ್ಯದರ್ಶಿ ಯು. ಬಸವರಾಜು ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಕೋಮು ಹಾಗೂ ಜಾತಿ ದ್ವೇಷಗಳನ್ನು ಮುಂದುವರೆಸುವ ಉದ್ದೇಶದಿಂದಲೇ ಮತಾಂತರ ನಿಷೇಧ ವಿದೇಯಕವನ್ನು ಮಂಡಿಸಲಾಗಿದೆ. ಅಲ್ಲದೆ, ದುಡಿಯುವ ಜನತೆಯನ್ನು ವಿಭಜನೆಗೆ, ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ ದುರುದ್ದೇಶದಿಂದ ರೂಪಿಸಲಾದ ವಿಧೇಯಕ ಇದಾಗಿದೆ ಎಂದು ಉಲ್ಲೇಖಿಸಿದ್ದಾರೆ.
ರೈತ ವಿರೋಧಿ, ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರ ಕೃಷಿ ಕಾಯ್ದೆಗಳನ್ನು ಮತ್ತು ಬಡವರು ಹಾಗೂ ದಲಿತರ ವಿರೋಧಿಯಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ವಾಪಾಸು ಪಡೆಯುವುದನ್ನು ಮರೆಸುವ ತಂತ್ರದ ಭಾಗವಾಗಿ ಇಂತಹ ಭಾವನಾತ್ಮಕ ವಿಷಯಗಳಿಗೆ ಒತ್ತು ಕೊಡಲಾಗುತ್ತಿದೆ. ಅಲ್ಲದೆ, ವಿದೇಯಕವು ಮತಾಂತರಗೊಂಡಿರುವ ವ್ಯಕ್ತಿಗಳ ಮೇಲೆ ಮತ್ತು ಅಂತಹ ಮತಾಂತರಗೊಂಡಿರುವ ವ್ಯಕ್ತಿಗಳಿರುವ ಧಾರ್ಮಿಕ ಸಂಸ್ಥೆಗಳು ಹಾಗೂ ಅದರ ಮುಖಂಡರ ಮೇಲೆ ದಾಳಿ ನಡೆಸಲು ಮತಾಂಧ ಹಾಗೂ ಜಾತಿವಾದಿ ಪುಂಡರಿಗೆ ಕಲಂ-4 ಕುಮ್ಮಕ್ಕು ನೀಡುತ್ತದೆ ಎಂದು ಅವರು ಟೀಕಿಸಿದ್ದಾರೆ.