×
Ad

ಶಾಲು ತಂದಿದ್ದೇನೆ, ಸದನದಲ್ಲೇ ಮಲಗುತ್ತೇನೆ: ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ

Update: 2021-12-22 22:41 IST

ಬೆಳಗಾವಿ, ಡಿ.22: ಉಡುಪಿಯ ಡೀಮ್ಡ್ ಅರಣ್ಯ ಪ್ರದೇಶದ ಹೆಸರಿನಲ್ಲಿ ಬಡವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದಕ್ಕೆ ಸೂಕ್ತ ಉತ್ತರ ನೀಡದ ಹೊರತು, ನಾನು ಸದನದಲ್ಲೇ ಮಲಗುತ್ತೇನೆ. ಅದಕ್ಕಾಗಿ ಶಾಲು ತಂದಿದ್ದೇನೆ ಎಂದು ಕಾಂಗ್ರೆಸ್ ಪರಿಷತ್ತಿನ ಹಿರಿಯ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಸದನದ ಗಮನ ಸೆಳೆದರು.

ಬುಧವಾರ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪ ವೇಳೆ ಅವರು ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಬಡವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. 2016ರಿಂದ ಇದಕ್ಕಾಗಿ ಹೋರಾಟ ನಡೆಸಿದರೂ ಪರಿಹಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಆರ್.ಅಶೋಕ್, ಇದು ನಮ್ಮ ಅವಧಿಯಲ್ಲಿ ನಡೆದಿದ್ದು ಅಲ್ಲ. ಆದರೂ, ಈ ಸಮಸ್ಯೆಗೆ ಪರಿಹಾರ ಕಲ್ಪಿಸುವುದು ನಮ್ಮ ಕರ್ತವ್ಯವಾಗಿದ್ದು, ಈಗಾಗಲೆ, ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಎರಡು ಸುತ್ತಿನ ಸಭೆ ನಡೆಸಿದ್ದೇವೆ.

ಈ ಹಿಂದೆ ಬೇಕಾಬಿಟ್ಟಿಯಾಗಿ ಅಧಿಕಾರಿಗಳು ಅವೈಜ್ಞಾನಿಕವಾಗಿ ಡೀಮ್ಡ್ ಫಾರೆಸ್ಟ್‍ಗೆ ಸ್ಥಳ ನೀಡಿದ್ದಾರೆ. 10 ಲಕ್ಷ ಹೆಕ್ಟೇರ್ ಪ್ರದೇಶವು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿದೆ. ಇದರಲ್ಲಿ ಕುಂದಾಪುರ, ಉಡುಪಿ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ ಈ ಪ್ರದೇಶದಲ್ಲಿರುವ ಜನರು ಮನೆ ನಿರ್ಮಾಣ ಮಾಡಿಕೊಂಡು ಕೃಷಿ ಆರಂಭಿಸಿದ್ದು, ಇವರಿಗೆ ಹಕ್ಕು ಪತ್ರ ಸಿಕ್ಕಿಲ್ಲ ಎಂಬುದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸುವ ಬಗ್ಗೆ ಕಾನೂನು ಇಲಾಖೆ ಜತೆ ಚರ್ಚಿಸಲಾಗಿದೆ. ಈ ಮೂಲಕ ಅರಣ್ಯ ಇಲಾಖೆಯಿಂದ ಜಮೀನು ಮರಳಿ ಪಡೆಯಲಿದ್ದೇವೆ ಎಂದರು.

ಸಚಿವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪಚಂದ್ರ ಶೆಟ್ಟಿ ಸದನದ ಬಾವಿಗಿಳಿದರು. ಬಳಿಕ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ನಿಯಮ 53, 94(ಸಿ) ಅಡಿಯಲ್ಲಿ ಮಂಜೂರು ಮಾಡಿದ ಭೂಮಿಯನ್ನು ಅರಣ್ಯ ಇಲಾಖೆ ಹಲವಡೆ ಮರಳಿ ಪಡೆದಿದೆ. ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಮಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ. 

ಕಂದಾಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಕ್ಕು ಪತ್ರ ನೀಡಿದ್ದರೂ ಅರಣ್ಯ ಇಲಾಖೆ ಮಧ್ಯಪ್ರವೇಶಿಸಿ ಜಮೀನು, ಮನೆ ಮರಳಿ ಪಡೆಯುತ್ತಿವೆ ಎಂದು ಆರೋಪಿಸಿದರು. ಈ ವೇಳೆ ಏರು ಧ್ವನಿಯಲ್ಲಿ ಪ್ರತಾಪಚಂದ್ರ ಶೆಟ್ಟಿ, ನನಗೆ ನ್ಯಾಯ ಬೇಕು. ಇಲ್ಲವಾದರೆ, ನಾನು ಇಲ್ಲೇ ಮಲಗುತ್ತೇನೆ ಎಂದರು. 

ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿರುವ ಡೀಮ್ಡ್ ಅರಣ್ಯ ಪ್ರದೇಶದಲ್ಲಿ 6.44 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ಪಡೆದುಕೊಳ್ಳುತ್ತಿದ್ದು, ಇಲ್ಲಿ ಮನೆ ನಿರ್ಮಾಣ ಮಾಡಿಕೊಂಡು ಕೃಷಿಯಲ್ಲಿ ತೊಡಗಿರುವವರಿಗೆ ಹಕ್ಕು ಪತ್ರ ವಿತರಿಸುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

ತದನಂತರ ಈ ವಿಚಾರವನ್ನು ಗುರುವಾರ ಅರ್ಧಗಂಟೆಗೆ ಚರ್ಚೆಗೆ ಅವಕಾಶ ಕಲ್ಪಿಸುವುದೆಂದು ಸಭಾಪತಿ ಹೇಳಿದ ಮೇಲೆ ಬಾವಿಯಿಂದ ಮೇಲೆ ಬಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News