ಚಾರ್ಮಾಡಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಕೇಂದ್ರ ಸರಕಾರ ಚಿಂತನೆ: ಶೋಭಾ ಕರಂದ್ಲಾಜೆ

Update: 2021-12-22 18:05 GMT

ಚಿಕ್ಕಮಗಳೂರು, ಡಿ.22: ಚಾರ್ಮಾಡಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಲು ಚಿಂತಿಸಲಾಗಿದೆ ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬುಧವಾರ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾರ್ಮಾಡಿ ಘಾಟ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುತ್ತಿದ್ದು, ಶೀಘ್ರ ಈ ಸಂಬಂಧ ಸ್ಪಷ್ಟನೆ ದೊರೆಯಲಿದೆ ಎಂದರು.

ಚಾರ್ಮಾಡಿ ರಸ್ತೆ ಮಲೆನಾಡು ಕರಾವಳಿ ಸಂಪರ್ಕಿಸುವ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ಆದರೆ ಪ್ರತೀ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಮಣ್ಣು ಕಲ್ಲು ಕುಸಿದು ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸಬೇಕೆಂಬ ಅಪೇಕ್ಷೆ ಸರಕಾರದ್ದಾಗಿದೆ, ಆದರೆ ಇದಕ್ಕೆ ಅರಣ್ಯ ಇಲಾಖೆಯ ಆಕ್ಷೇಪಣೆಯೂ ಇದೆ. ಆದರೆ ಚರ್ಚೆ ಮುಂದುವರಿದಿದ್ದು, ಶೀಘ್ರ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

ಬಲವಂತದ ಮತಾಂತರ ನಿಷೇದ ಕಾಯ್ದೆಯಲ್ಲಿರುವ ಎಲ್ಲ ಅಂಶಗಳನ್ನು ಕಟ್ಟುನಿಟ್ಟಿನಿಂದ ಜಾರಿ ಮಾಡುವುದು ಸರಕಾರದ ನಿಲುವಾಗಿದೆ. ಆದರೆ ಕುರ್ಚಿಗಾಗಿ ಬೇರೆ ಧರ್ಮದವರನ್ನು ಓಲೈಕೆ ಮಾಡಿಕೊಳ್ಳಲು ಕಾಂಗ್ರೆಸ್‍ನವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತಾಂತರ ಎಂಬುದು ಸಮಾಜಕ್ಕೆ ಮಾರಕ, ಬಡತನ, ಅನಾರೋಗ್ಯ, ಅನಕ್ಷರತೆಯನ್ನು ಬಳಸಿಕೊಂಡು ಮತಾಂತರ ಮಾಡುವ ಹುನ್ನಾರ ದೇಶಾದ್ಯಂತ ನಡೆಯುತ್ತಿದೆ. ಇದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆಯ ಜಾರಿ ಅಗತ್ಯವಿದೆ.

- ಶೋಭಾ ಕರಂದ್ಲಾಜೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News