ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 18.71 ಲಕ್ಷ ಮಂದಿ ವಸತಿ ರಹಿತರು: ಸಚಿವ ಸೋಮಣ್ಣ

Update: 2021-12-22 18:19 GMT

ಬೆಳಗಾವಿ, ಡಿ.22: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 2018ರಲ್ಲಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಸಮೀಕ್ಷೆಯಲ್ಲಿ 18,71,691 ವಸತಿರಹಿತರು ಹಾಗೂ 7,19,190 ನಿವೇಶನ ರಹಿತರಿರುವ ಮಾಹಿತಿ ಲಭ್ಯವಾಗಿದೆ.

ಅದೇ ರೀತಿ ನಗರದ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೈಗೊಂಡ ಸಮೀಕ್ಷೆ ಅನುಸಾರ 1,41,5,121 ಮನೆಗಳಿಗೆ ಬೇಡಿಕೆ ಇರುವುದು ಕಂಡುಬಂದಿದೆ. ಬೀದರ್ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 89219 ವಸತಿ ರಹಿತರು ಹಾಗೂ 4347 ನಿವೇಶನರಹಿತರು ಕಂಡುಬಂದಿದ್ದಾರೆ. 

ನಗರ ಪ್ರದೇಶದಲ್ಲಿ ಇದೇ ಜಿಲ್ಲೆಯಲ್ಲಿ 21,409 ವಸತಿ ರಹಿತರು ಮತ್ತು 25,533 ನಿವೇಶನರಹಿತರಿದ್ದಾರೆ ಎಂಬ ಮಾಹಿತಿಯನ್ನು ವಸತಿ ಸಚಿವ ವಿ.ಸೋಮಣ್ಣ ಅವರು ವಿಧಾನಪರಿಷತ್‍ನಲ್ಲಿ ಬಿಚ್ಚಿಟ್ಟರು.

ಸದಸ್ಯ ವಿಜಯಸಿಂಗ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಾಲಿಗೆ ವಿವಿಧ ವಸತಿ ಯೋಜನೆಗಳಡಿ 5ಲಕ್ಷ ಹೊಸ ಮನೆಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ 4ಲಕ್ಷ ಮತ್ತು ನಗರ ಪ್ರದೇಶಕ್ಕೆ 1ಲಕ್ಷ ಮನೆಗಳ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅರ್ಹ ಫಲಾನುಭವಿಗಳ ಆಯ್ಕೆಗೆ ಸೂಚನೆ ನೀಡಲಾಗಿದ್ದು, ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಬೀದರ್ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೇ 2018-19ನೆ ಸಾಲಿನಿಂದ ಇಲ್ಲಿಯವರೆಗೆ ವಿವಿಧ ವಸತಿ ಯೋಜನೆಗಳಡಿ 18,875 ಮನೆಗಳನ್ನು ಮಂಜೂರು ಮಾಡಿದ್ದು, ಈ ಪೈಕಿ 16,057 ಫಲಾನುಭವಿಗಳನ್ನು ಆಯ್ಕೆಗೊಳಿಸಿ ಕಾಮಗಾರಿ ಆದೇಶಪತ್ರ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News