ಕೃಷಿ ಜಮೀನು ದಾಖಲೆ ತಿದ್ದುಪಡಿ ಮಾಡಿದರೆ ಕ್ರಿಮಿನಲ್ ಕೇಸ್: ಕಂದಾಯ ಸಚಿವ ಅಶೋಕ್

Update: 2021-12-22 18:23 GMT

ಬೆಳಗಾವಿ, ಡಿ.22: ಕೃಷಿ ಜಮೀನನ್ನು ದಾಖಲೆಗಳಲ್ಲಿ ಸ್ವಯಂ ಪ್ರೇರಿತವಾಗಿ ಕೃಷಿಯೇತರ ಜಮೀನು ಎಂದು ತಿದ್ದುಪಡಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಂ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರಡಿ ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿ, ಪ್ರಸ್ತುತ ಪ್ರಮಾಣ ಪತ್ರ ಆಧಾರಿತ ಭೂ ಪರಿವರ್ತನೆಯ ತಂತ್ರಾಂಶ ಜಾರಿಗೊಳಿಸಿರುವುದರಿಂದ ನಿಗದಿತ ಅವಧಿಯಲ್ಲಿ ಅರ್ಜಿದಾರರು ಕೋರಿರುವ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ನಂತರ ಭೂಮಿ ತಂತ್ರಾಂಶದಲ್ಲಿ ಪಹಣಿ ಕಾಲಂ 9 ಮತ್ತು 10 ರಲ್ಲಿ ಭೂಪರಿವರ್ತನೆ ಎಂಬುದಾಗಿ ಫ್ಲಾಗ್ ಆಗುತ್ತದೆ. ತದನಂತರ ಸರ್ವೇ ನಂಬರ್, ಸರ್ವೇ ದಾಖಲೆಗಳಲ್ಲಿ ದರುಸ್ತಿಯಾದ ನಂತರ ಎನ್.ಎ.ಖರಾಬು ಎಂಬುವುದಾಗಿ ನಮೂದು ಮಾಡಲಾಗಿದೆ ಎಂದು ವಿವರಿಸಿದರು.

ಅಲ್ಲದೆ, ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಆನ್‍ಲೈನ್‍ನಲ್ಲಿ ತಂತ್ರಾಂಶವನ್ನು ಜಾರಿಗೆ ತಂದಿರುವುದರಿಂದ ಭೌತಿಕವಾಗಿ ಭೂ ಪರಿವರ್ತನೆ ಆದೇಶ ನೀಡಿಲ್ಲ. ಹೀಗಾಗಿ, ಕೃಷಿ ಜಮೀನನ್ನು ದಾಖಲೆಗಳಲ್ಲಿ ಸ್ವಯಂಪ್ರೇರಿತವಾಗಿ ಕೃಷಿಯೇತರ ಜಮೀನು ಎಂದು ತಿದ್ದುಪಡಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು.

ಜತೆಗೆ ತಪ್ಪಿತಸ್ಥರಿಗೆ ಒಂದ ವರ್ಷ ಜೈಲು, ಐದು ಸಾವಿರ ರೂ. ಜುಲ್ಮಾನೆ ಬೀಳಲಿದೆ ಎಂದು ಸದನಕ್ಕೆ ಸಚಿವರು ತಿಳಿಸಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಪ್ರಸ್ತಾಪಿಸಿ ಗ್ರಾಮ, ಪಟ್ಟಣ ಪಂಚಾಯತಿ, ಬಫರ್ ಪ್ರದೇಶ ಹೆಸರಿನಲ್ಲಿ ರೈತರ ಅಕ್ರಮ ಸಕ್ರಮ ಅರ್ಜಿಗಳನ್ನು ಅಧಿಕಾರಿಗಳು ವಿನಾಕಾರಣ ತಿರಸ್ಕಾರ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಒತ್ತುವರಿ ಜಮೀನು ವಶ: ರಾಜ್ಯದಲ್ಲಿ ಒತ್ತುವರಿಯಾಗಿರುವ ಸರಕಾರಿ ಭೂಮಿಯನ್ನು ಯಾವುದೇ ಮುಲ್ಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ಆರ್.ಅಶೋಕ್ ಹೇಳಿದರು.

ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗೋಮಾಳ ಮಂಜೂರಾತಿ, ಕೃಷಿ ಮಾಡುತ್ತಿರುವುದು, ಸರಕಾರಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಎಲ್ಲವನ್ನೂ ಒತ್ತುವರಿ ಎಂದು ಉಲ್ಲೇಖಿಸಲಾಗಿದೆ. ಆದರೆ ಅಸಲಿಗೆ ಒತ್ತುವರಿಯಾಗಿರುವುದು 28,872 ಎಕರೆ ಮಾತ್ರ ಎಂದು ಹೇಳಿದರು.

ಒತ್ತುವರಿ ತೆರವಿಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಸದನ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಶನಿವಾರ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಇದಕ್ಕೂ ಮುನ್ನ ಹರಿಪ್ರಸಾದ್ ಪ್ರಸ್ತಾಪಿಸಿ, ಬೆಂಗಳೂರು ಗ್ರಾಮಾಂತರದಲ್ಲಿ 36,229, ಬೆಂಗಳೂರು ನಗರದಲ್ಲಿ 38,894 ಒತ್ತುವರಿಯಾಗಿದೆ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಚಿವರು ಉತ್ತರದಲ್ಲಿ ರಾಜ್ಯದಲ್ಲಿ 14 ಸಾವಿರ ಎಕರೆಯಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲೇ 38 ಸಾವಿರ ಎಕರೆಯಾಗಿದೆ. ಆದರೆ ರಾಜ್ಯದಲ್ಲಿ ಕೇವಲ 14 ಸಾವಿರ ಎಕರೆ ಎಂದರೆ ಹೇಗೆ, ಉತ್ತರ ತಪ್ಪಾಗಿದೆ ಎಂದು ಸದನದ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News