×
Ad

ರಾಜ್ಯ ಸರ್ಕಾರದ 21 ಉದ್ದಿಮೆಗಳು ನಷ್ಟದಲ್ಲಿ : ಸಚಿವ ಎಂಟಿಬಿ ನಾಗರಾಜ್

Update: 2021-12-23 07:54 IST
ಎಂಟಿಬಿ ನಾಗರಾಜ್

ಬೆಳಗಾವಿ: ರಾಜ್ಯ ಸರ್ಕಾರಿ ಅಧೀನದ 60 ಉದ್ದಿಮೆಗಳ ಪೈಕಿ 21 ನಷ್ಟದಲ್ಲಿವೆ ಎಂದು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಎಂಟಿಬಿ ನಾಗರಾಜ್ ವಿಧಾನ ಪರಿಷತ್‌ನಲ್ಲಿ ಹೇಳಿದ್ದಾರೆ.

ಸಾರಿಗೆ, ನೀರಾವರಿ, ವಿದ್ಯುತ್ ಸರಬರಾಜು ಮತ್ತು ಮೂಲಸೌಕರ್ಯ ವಲಯಗಳ ಕಂಪನಿಗಳು ನಷ್ಟದಲ್ಲಿವೆ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ಎಲ್ಲ ನಾಲ್ಕು ಸಾರಿಗೆ ನಿಗಮಗಳು, ಎರಡು ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದಲ್ಲಿವೆ. ಇದರ ಜತೆಗೆ ಕೆಎನ್‌ಎನ್‌ಎಲ್, ಕೆಚ್‌ಡಿಸಿಎಲ್, ಕೆಆರ್‌ಡಿಸಿಎಲ್, ಕೆಎಸ್‌ಟಿಡಿಸಿ, ಕೆಎಫ್‌ಡಿಸಿಎಲ್ ಮತ್ತು ಶ್ರೀ ಕಂಠೀರವ ಸ್ಟುಡಿಯೊ ಲಿಮಿಟೆಡ್ ಕೂಡಾ ನಷ್ಟದಲ್ಲಿವೆ ಎಂದು ವಿವರಿಸಿದರು.

ನಷ್ಟದಲ್ಲಿರುವ ಉದ್ದಿಮೆಗಳ ಪುನಶ್ಚೇತನಕ್ಕೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುತ್ತಿವೆ. ಕೆಲ ಸಾರ್ವಜನಿಕ ಉದ್ದಿಮೆಗಳು ಇನ್ನೂ ಲೆಕ್ಕ ಪರಿಶೋಧನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಒಟ್ಟಾರೆ ಸೇವಾ ಉದ್ದೇಶದ ಕೆಲ ಸಂಸ್ಥೆಗಳಿಗೆ ನಷ್ಟ ಅನ್ವಯಿಸುವುದಿಲ್ಲ ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದರು.

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಇಂಥ ಉದ್ದಿಮೆಗಳ ಮೌಲ್ಯಮಾಪನ ಮಾಡುವ ಜತೆಗೆ ಅಂಥ ಸಂಸ್ಥೆಗಳ ಸಿಬ್ಬಂದಿ ಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಲಿದೆ ಎಂದು ಪ್ರಕಾಶ್ ರಾಠೋಡ್ ಅವರ ಪ್ರಶ್ನೆಗೆ ಉತ್ತರಿಸಿದರು. ರಾಜ್ಯ ಸರ್ಕಾರದ 60 ಪಿಎಸ್‌ಯುಗಳಲ್ಲಿ 1.94 ಲಕ್ಷ ಸಿಬ್ಬಂದಿ ಇದ್ದಾರೆ ಎಂದರು.

2015ರಲ್ಲಿ ಉತ್ಪಾದನಾ ಘಟಕ ಮುಚ್ಚಿರುವ ಮೈಸೂರು ಪೇಪರ್ ಮಿಲ್ಸ್ 1244 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಅಂದಾಜಿಸಲಾಗಿದೆ. 1936ರಲ್ಲಿ ಸ್ಥಾಪನೆಯಾದ ಈ ಉದ್ದಿಮೆಯ ಪುನಶ್ಚೇತನ ಅಸಾಧ್ಯ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಇದರ ಕಾರ್ಯಾಚರಣೆಯನ್ನು ಖಾಸಗಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆ ನಡೆದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಆದರೆ ಎಂಪಿಎಂ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು ಖಾಸಗಿಗೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News