×
Ad

ನಮ್ಮ ಸುದ್ದಿಗೆ ಬಂದರೆ ಅವರನ್ನು ಚಿಂದಿ ಚಿಂದಿ ಮಾಡ್ತೇವೆ: ಸಚಿವ ಈಶ್ವರಪ್ಪ

Update: 2021-12-23 18:02 IST

ಬೆಳಗಾವಿ: ಭಾರೀ ವಿರೋಧದ ಮಧ್ಯೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಕ್ಕೆ  ವಿಧಾನಸಭೆಯಲ್ಲಿ ಅಂಗೀಕಾರ ದೊರಕಿದ್ದು, ವಿಧೇಯಕದ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಗ್ರಾಮೀಣಾಭೀವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ 'ನಾವು ಮತಾಂತರಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ, ನಮ್ಮ ಸುದ್ದಿಗೆ ಬಂದರೆ ಅವರನ್ನು ಚಿಂದಿ ಚಿಂದಿ ಮಾಡ್ತೇವೆ' ಎಂದು ಹೇಳಿಕೆ ನೀಡಿದ್ದು, ಕೆಲಕಾಲ ಸದನದಲ್ಲಿ ಗದ್ದಲ ಸೃಷ್ಟಿಯಾಗಿರುವ ಪ್ರಸಂಗ ನಡೆದಿದೆ. 

ಈ ಕಾನೂನಿನ ಹಿಂದೆ ಆರೆಸ್ಸೆಸ್ ಕೈವಾಡವಿದೆ. ಇದೊಂದು ಅಮಾನವೀಯ, ಸಂವಿಧಾನ ಬಾಹಿರ ಕಾನೂನು ಎಂದು ಸಿದ್ದರಾಮಯ್ಯ ಟೀಕಿಸಿದರು. ಇದಕ್ಕೆ ಆಕ್ರೋಶಗೊಂಡು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಇಲ್ಲಿರುವ ಬಿಜೆಪಿಯ ಎಲ್ಲ ಶಾಸಕರು ಆರೆಸ್ಸೆಸ್. ಹೌದು ಆರೆಸ್ಸೆಸ್‍ನಿಂದಲೆ ಈ ಕಾನೂನು ತರುತ್ತಿದ್ದೇವೆ. ಇಂತಹ ಇನ್ನೂ ನೂರು ಕಾನೂನು ತರುತ್ತೇವೆ ಎಂದರು.

ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೇವೆ. ದೇಶ, ರಾಜ್ಯ ಹಾಗೂ ಧರ್ಮಕ್ಕೆ ಅಗತ್ಯವಿರುವ ಕಾನೂನುಗಳನ್ನು ತರುತ್ತೇವೆ. ನಾವು ಬೇರೆಯವರ ಕಡೆ ಹೋಗಲ್ಲ, ನಮ್ಮ ವಿಚಾರಕ್ಕೆ ಬಂದರೆ ಖಂಡಿತ ಚಿಂದಿ ಚಿಂದಿ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು. ಇದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು.

ಸಚಿವ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರವಾಗಿ ವಿರೋಧಿಸಿ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಭಾರತ್ ಮಾತಾ ಕೀ ಜೈ, ಜೈ ಶ್ರೀ ರಾಂ ಘೋಷಣೆಗಳನ್ನು ಬಿಜೆಪಿ ಸದಸ್ಯರು ಮೊಳಗಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News