ನಾಗರಿಕರ ಧಾರ್ಮಿಕ ಹಕ್ಕು ಸಂರಕ್ಷಣೆಗೆ ವಿಧೇಯಕ ತರಲಾಗಿದೆ: ಬಿ.ಎಸ್.ಯಡಿಯೂರಪ್ಪ
ಬೆಳಗಾವಿ, ಡಿ.23: ಸಂವಿಧಾನದ 25ನೆ ಪರಿಚ್ಛೇದದಲ್ಲಿ ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಖಾತ್ರಿಗೊಳಿಸಲಾಗಿದೆ. ದೇಶದ ಯಾವುದೆ ವ್ಯಕ್ತಿ, ತಮ್ಮ ಆಯ್ಕೆಯ ಧರ್ಮ ಆಚರಿಸಲು, ಪ್ರಸಾರಿಸಲು ಮುಕ್ತ ಅವಕಾಶವಿದೆ. ಈ ವಿಧೇಯಕದಲ್ಲಿ ಸಂವಿಧಾನ ದತ್ತವಾದ ಧಾರ್ಮಿಕ ಹಕ್ಕು ಸಂರಕ್ಷಿಸಲಾಗಿದೆಯೇ ಹೊರತು, ಯಾವುದೆ ರೀತಿಯ ದಾಳಿ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುರುವಾರ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸ್ನೇಹಿತರು ಗೊಂದಲದಲ್ಲಿರುವಂತೆ ಅವರಿಗೆ ತಪ್ಪು ಕಲ್ಪನೆಯಿದೆ. ನಿನ್ನೆ ಸದನದಲ್ಲಿ ವಿಧೇಯಕ ಮಂಡಿಸಿದ ತರುವಾಯ ಅವರ ವರ್ತನೆ ಗಮನಿಸಿದರೆ ಅವರಲ್ಲಿ ಗೊಂದಲ ಇರುವುದು ಖಚಿತ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಈ ಪ್ರಸ್ತಾವಕ್ಕೆ ತಮ್ಮದೇ ಆದ ರೀತಿಯಲ್ಲಿ ಅನುಮತಿ ನೀಡುವ ಮಟ್ಟಕ್ಕೆ ಹೋಗಿದ್ದರು. ಕ್ಯಾಬಿನೆಟ್‍ಗೆ ಹೋಗಿರಲಿಲ್ಲ. ಮತಾಂತರ ಆಗಬಾರದು ಎಂಬುದು ನಮ್ಮ ಉದ್ದೇಶ. ಈ ದೇಶದಲ್ಲಿ ಕ್ರೈಸ್ತರು, ಮುಸ್ಲಿಮರು, ಹಿಂದೂಗಳು ತಮ್ಮದೆ ಆದ ರೀತಿಯಲ್ಲಿ ಧಾರ್ಮಿಕ ಆಚರಣೆಗಳನ್ನು ಅನುಸರಿಸಲು ಮುಕ್ತರಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಇಲ್ಲಿರುವ ಪ್ರಶ್ನೆ ಬಲವಂತದ ಮತಾಂತರ ಬೇಡ ಅನ್ನೋದು. ಸಿದ್ದರಾಮಯ್ಯ ತರಲು ಮುಂದಾಗಿದ್ದ ಕಾನೂನಿಗೆ ನಾವು ಕೆಲವು ಮಾರ್ಪಾಡು ಮಾಡಿ ತಂದಿರುವುದು ಅವರ ಆಕ್ಷೇಪಕ್ಕೆ ಕಾರಣ ಇರಬಹುದು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಧೇಯಕದ ಪ್ರತಿಯನ್ನು ಹರಿದು ಬಿಸಾಕಿದರು ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ 400 ಎಂಪಿಗಳು ಇರುತ್ತಿದ್ದರು, ಈಗ 46ಕ್ಕೆ ಬಂದಿದ್ದಾರೆ. ಮಸೂದೆಯನ್ನು ಹರಿದು ಬಿಸಾಕಿದಂತೆ, ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಬಿಸಾಕುತ್ತಾರೆ. ಅದಕ್ಕೆ ಅವಕಾಶ ಕೊಡಬೇಡಿ. ನಾವು ಮುಸ್ಲಿಮರ, ಕ್ರೈಸ್ತರ ವಿರೋಧಿಯಲ್ಲ. ಬಲವಂತದಿಂದ ಆಗುತ್ತಿರುವ ಮತಾಂತರವನ್ನು ತಡೆಯಲು ಕಠಿಣವಾದ ಕಾನೂನು ತೆಗೆದುಕೊಂಡು ಬಂದಿದ್ದೇನೆ. ಇದನ್ನು ಸರ್ವಾನುಮತದಿಂದ ಪಾಸ್ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.