ಮತಾಂತರ ನಿಷೇಧ ವಿಧೇಯಕ: ನೈತಿಕ ಪೊಲೀಸ್‍ಗಿರಿಗೆ ಕುಮ್ಮಕ್ಕು ನೀಡುವ ಅಪಾಯವಿದೆ; ಮಾಜಿ ಸಚಿವ ಕೆ.ಜೆ.ಜಾರ್ಜ್
ಬೆಳಗಾವಿ, ಡಿ.23: ಸಂವಿಧಾನವು ನಮಗೆ ಯಾವುದೆ ಧರ್ಮ ಅನುಸರಿಸಲು ಅವಕಾಶ ನೀಡಿದೆ. ಆದರೆ, ಈ ಬಿಲ್‍ನಿಂದ ನೈತಿಕ ಪೊಲೀಸ್‍ಗಿರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಈಗಾಗಲೆ, ಹುಬ್ಬಳ್ಳಿ, ಚಿಕ್ಕಬಳ್ಳಾಪುರದಲ್ಲಿ ಚರ್ಚ್‍ಗಳ ಮೇಲೆ ದಾಳಿಯಾಗಿದೆ. ನಾವು ಸೌಹಾರ್ದ ವಾತಾವರಣ ರೂಪಿಸಲು ಶ್ರಮಿಸಬೇಕು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಜೆ.ಜಾರ್ಜ್ ಹೇಳಿದರು.
ಗುರುವಾರ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಚರ್ಚ್‍ನಿಂದಲೆ ಆದೇಶ ಬಂದು ಮತಾಂತರ ಆಗುತ್ತದೆ ಎಂದು ದೂರಿದ್ದರು. ಇದರಿಂದ ಓರ್ವ ಕ್ರೈಸ್ತನಾದ ನನ್ನ ಮನಸ್ಸಿಗೆ ತುಂಬಾ ನೋವಾಯಿತು ಎಂದರು.
ನಾನು ಐದು ಬಾರಿ ಶಾಸಕನಾಗಿದ್ದೇನೆ. ಚರ್ಚ್‍ಗೆ ಹೋಗುತ್ತೇನೆ. ಆದರೆ, ಯಾವ ಚರ್ಚ್‍ನಲ್ಲಿಯೂ ಮತಾಂತರದ ಬಗ್ಗೆ ಮಾತನಾಡಲ್ಲ. ಯಾರು ಆಡಳಿತ ನಡೆಸುತ್ತಿರುತ್ತಾರೆ ಅವರಿಗೆ ಒಳಿತಾಗಲಿ, ಸಮಾಜದಲ್ಲಿ ಶಾಂತಿ, ಸಮಾಧಾನ ಇರಲಿ ಎಂದು ಪ್ರಾರ್ಥಿಸುತ್ತಾರೆ. ಎಲ್ಲ ಧರ್ಮದಲ್ಲಿ ಎಲ್ಲರೂ ಒಳ್ಳೆಯವರಲ್ಲ, ಕೆಟ್ಟವರೂ ಇರುತ್ತಾರೆ. ತಪ್ಪು ಮಾಡಿದವರಿಗೆ ಕಾನೂನು ರೀತಿ ಶಿಕ್ಷೆ ಕೊಡಲಿ ಎಂದು ಜಾರ್ಜ್ ಹೇಳಿದರು.
ಬಲವಂತದ ಮತಾಂತರ ಅಪರಾಧ ಎಂದು ಸಂವಿಧಾನವೇ ಹೇಳಿದೆ. ನಾವು ಸಂವಿಧಾನದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ. ಹಿಂದೂ ಧರ್ಮಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸ ಇದೆ. ಮೊಘಲರು, ಕ್ರೈಸ್ತರು, ಪೋರ್ಚುಗೀಸರು ಈ ದೇಶಕ್ಕೆ ಬಂದರೂ ಯಾರಿಂದಲೂ ಹಿಂದೂ ಧರ್ಮವನ್ನು ಏನು ಮಾಡಲು ಆಗಿಲ್ಲ. ನನಗೆ ಬೌದ್ಧ ಧರ್ಮದ ಮೇಲೆಯೂ ನಂಬಿಕೆ ಇದೆ. ಒಂದು ಕಾಲದಲ್ಲಿ ಬೌದ್ಧ ಧರ್ಮದ ಪ್ರಭಾವ ಹೇಗಿತ್ತೆಂದರೆ ಹಲವಾರು ದೇಶಗಳು ಬೌದ್ಧ ಧರ್ಮವನ್ನು ಒಪ್ಪಿಕೊಂಡವು ಎಂದು ಅವರು ತಿಳಿಸಿದರು.
ಕಾನೂನುಗಳಿಂದ ಎಲ್ಲವನ್ನು ನಿಯಂತ್ರಿಸಲು ಆಗುವುದಿಲ್ಲ. ಜನಾಭಿಪ್ರಾಯವು ಬದಲಾಗಬೇಕು. ನಮ್ಮ ಸಮಾಜದಲ್ಲಿ ಬಡತನ ಇದೆ, ಶೋಷಣೆ ಇದೆ. ಒಂದು ಸರಕಾರವಾಗಿ ನಾವು ಅಸ್ಪøಶತೆಯನ್ನು ನಿಲ್ಲಿಸಲು, ತುಳಿತಕ್ಕೊಳಗಾದವರ ಜೀವನಮಟ್ಟವನ್ನು ಮೇಲಕ್ಕೆತ್ತಲು ಕಾನೂನುಗಳನ್ನು ತಂದರೆ, ನಾವು ಅದಕ್ಕೆ ಸಹಕಾರ ನೀಡುತ್ತೇವೆ ಎಂದು ಜಾರ್ಜ್ ಹೇಳಿದರು.
ಈ ವಿಧೇಯಕಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅದರಲ್ಲಿನ ಉಡುಗೊರೆ, ಹಣ, ನಿವೇಶನ, ಉದ್ಯೋಗ, ಉಚಿತ ಶಿಕ್ಷಣದ ಆಮಿಷವೊಡ್ಡಿ ಮತಾಂತರ ಮಾಡಿದರೆ ಅಪರಾಧ ಎಂದು ಬಿಂಬಿಸಲಾಗಿದೆ. ನಮ್ಮ ಸಮುದಾಯವು ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಅದು ಅಪರಾಧವೇ? ಉದ್ಯೋಗ ನೀಡುವುದು ಅಪರಾಧವೇ? ಯಾರಾದರೂ ಜಾರ್ಜ್‍ನವರು ನನಗೆ ಉದ್ಯೋಗ ನೀಡಿ ಮತಾಂತರ ಮಾಡಿದರು ಎಂದರೆ ಏನಾಗಬಹುದು ಎಂದು ಅವರು ಪ್ರಶ್ನಿಸಿದರು.
ಮತಾಂತರದ ಬಗ್ಗೆ ದೂರು ನೀಡುವ ಅಧಿಕಾರವನ್ನು ಯಾರಿಗೆ ಕೊಟ್ಟಿದ್ದೀರಾ ಅದನ್ನು ಗಮನಿಸಿ. ಇವತ್ತಿನ ಕುಟುಂಬಗಳ ಪರಿಸ್ಥಿತಿ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.
ಕ್ರೈಸ್ತರ ಕ್ಷಮೆ ಕೋರಿದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್
ಮೂಲ ಕ್ರೈಸ್ತರು ಹಾಗೂ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ರಾಜ್ಯದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರದ ಬಗ್ಗೆ ಮಾತನಾಡುವಾಗ ನಾನು ನಮ್ಮ ತಾಯಿಯ ವಿಚಾರವನ್ನು ಪ್ರಸ್ತಾಪಿಸಿದೆ. ನಾನು ಪ್ರತಿನಿಧಿಸುತ್ತಿರುವ ಹೊಸದುರ್ಗ ತಾಲೂಕಿನಲ್ಲಿ ಲಿಂಗಾಯತರು, ಬೋವಿಗಳು, ಲಂಬಾಣಿ, ಕುರುಬ ಸಮಾಜದವರೇ ಕ್ರೈಸ್ತ ಸಮುದಾಯಕ್ಕೆ ಮತಾಂತರ ಆಗಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದರೆ ಪೊಲೀಸರಿಗೆ ಯಾವ ಕಾನೂನಿನಡಿ ದೂರು ದಾಖಲಿಸಬೇಕು ಎಂಬ ಗೊಂದಲ ಇದೆ. ಆದುದರಿಂದ, ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೆ.
ಗೂಳಿಹಟ್ಟಿ ಶೇಖರ್, ಬಿಜೆಪಿ ಶಾಸಕ