ಯಾವುದೇ ಧರ್ಮದ ವಿರುದ್ಧವಲ್ಲ, ಸಾಮರಸ್ಯ ಕಾಪಾಡಲು ವಿಧೇಯಕ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-12-23 17:15 GMT

ಬೆಳಗಾವಿ, ಡಿ. 23: ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021’ ಯಾವುದೇ ಧರ್ಮದ ವಿರುದ್ಧವಲ್ಲ. ಯಾವುದೇ ವರ್ಗದ ಜನರ ಹಕ್ಕುಗಳನ್ನು ಮೊಟಕು ಮಾಡುವುದಿಲ್ಲ. ಸಮಾಜದಲ್ಲಿ ಶಾಂತಿ-ಸಾಮರಸ್ಯ ಕಾಪಾಡುವ ಉದ್ದೇಶದಿಂದ ಮಸೂದೆ ತರಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ಸಮರ್ಥಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಶಾಸನ ಪರ್ಯಾಲೋಚನೆ ಮತ್ತು ಅಂಗೀಕಾರ ಪ್ರಸ್ತಾವ ಮಂಡಿಸಿ ವಿಧೇಯಕದ ವಿವರಣೆ ನೀಡಿದ ಅವರು, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸಹಿತ  ಎಂಟು ರಾಜ್ಯಗಳು ಈ ಕಾನೂನು ಜಾರಿಯಲ್ಲಿದ್ದು, ಒಂಭತ್ತನೆ ರಾಜ್ಯವಾಗಿ ಕರ್ನಾಟಕ ಈ ಕಾನೂನು ತರಲು ಮುಂದಾಗಿದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮತಾಂತರ ದೊಡ್ಡ ಪಿಡುಗು ಆಗಿದೆ. ಮತಾಂತರ ನಿಷೇಧಕ್ಕೆ ಮಠಾಧೀಶರು ಸೇರಿದಂತೆ ಹಲವು ವರ್ಗದ ಜನರ ಆಗ್ರಹಿಸಿದ್ದಾರೆ. ಹೀಗಾಗಿ ಬಲವಂತ, ಆಮಿಷ ಹಾಗೂ ಒತ್ತಾಯ ಪೂರ್ವಕ ಮತಾಂತರ ನಿಷೇಧಿಸಿ, ಶಿಕ್ಷೆ ಮತ್ತು ದಂಡ ವಿಧಿಸಲು ಕಾಯ್ದೆ ತರಲಾಗಿದೆ ಎಂದು ಅವರು ಹೇಳಿದರು.

 ತಮಿಳುನಾಡು ರಾಜ್ಯದಲ್ಲೂ ಕಾಯ್ದೆ ತರಬೇಕಾಗಿತ್ತು, ಆದರೆ ಆಗಿಲ್ಲ. ಈ ಕಾಯ್ದೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದ ಶಿಶು, ನಮ್ಮದಲ್ಲ. ಸ್ವಯಂ ಇಚ್ಛೆಯಿಂದ ಮತಾಂತರಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಆಮಿಷದ ಮತಾಂತರ ಮಾಡುವುದಕ್ಕೆ ನಮ್ಮ ವಿರೋಧವಿದೆ. ಈ ಕಾಯ್ದೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಧರ್ಮಗಳ ಅಸ್ಮಿತೆ ಕಾಪಾಡುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು. 

ಈ ಮನೆಯ ಸದಸ್ಯ ಗೂಳಿಹಟ್ಟಿ ಡಿ.ಶೇಖರ್ ಅವರ ತಾಯಿಯನ್ನೇ ಮತಾಂತರ ಮಾಡಿದ್ದು, ಸದನದಲ್ಲಿ ಪ್ರಸ್ತಾಪವಾಗಿತ್ತು. ಇದು ಮತಾಂತರ ಯಾವ ರೀತಿಯಲ್ಲಿ ಆಗುತ್ತಿದೆ ಎಂಬುದಕ್ಕೆ ಉದಾಹರಣೆ. ಉಡುಪಿ ಮಂಗಳೂರಿನಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕೈದು ಮಂದಿ ಆತ್ಮಹತ್ಯೆ ಮಾಡಿದ್ದಾರೆ.

ನಾವು ರೂಪಿಸಿರುವ ಮಸೂದೆಯಲ್ಲಿ ಯಾವುದೇ ವ್ಯಕ್ತಿ ಸ್ವಇಚ್ಛೆಯಿಂದ ತನ್ನ ಧರ್ಮ ಅನುಸರಣೆ, ಪ್ರಚಾರ ಮಾಡಲು ಮುಕ್ತ ಸ್ವಾತಂತ್ರ್ಯ ಇದೆ. ಮತಾಂತರ ಆಗಬೇಕಿದ್ದರೆ ಆಕೆ ಮತ್ತು ಆತ 30 ದಿನಗಳ ಮೊದಲೇ ತಾನು ವಾಸಿಸುವ ಜಿಲ್ಲೆಯ ಜಿಲ್ಲಾಧಿಕಾರಿಗೆ ತಿಳಿಸಬೇಕು. 21 ದಿನಗಳ ಒಳಗೆ ಜಿಲ್ಲಾಧಿಕಾರಿ ಮುಂದೆ ಹಾಜರಾಗಿರಬೇಕು. ಇದನ್ನು ಡಿಸಿ ನೋಟಿಸ್ ಬೋರ್ಡ್‍ನಲ್ಲಿ ಪ್ರಕಟಿಸಬೇಕು.

ಬಲವಂತ, ಒತ್ತಾಯ, ಆಮಿಷದ ಮತಾಂತರಕ್ಕೆ ಶಿಕ್ಷೆ ಇರಲಿಲ್ಲ. ಇದೀಗ ಆಮಿಷ-ಬಲವಂತ ಎಂದು ಡಿಸಿಗೆ ಕಂಡುಬಂದರೆ ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸಿ ಈ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ತರಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

3ರಿಂದ 10ವರ್ಷ ಶಿಕ್ಷೆ, 1ಲಕ್ಷ ರೂ.ದಂಡ: ಬಲವಂತದ ಮತಾಂತರ ಮಾಡಿದರೆ 3 ರಿಂದ ಐದು ವರ್ಷ ಜೈಲು ಶಿಕ್ಷೆ, 25 ಸಾವಿರ ರೂ.ದಂಡ, ಮಹಿಳೆಯರು, ಅಪ್ರಾಪ್ತರು, ಬುದ್ದಿಮಾಂದ್ಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ(ಎಸ್ಸಿ-ಎಸ್ಟಿ)ದವರನ್ನು ಮತಾಂತರ ಮಾಡಿದರೆ 3 ರಿಂದ 10 ವರ್ಷ ಶಿಕ್ಷೆ, 50ಸಾವಿರ ರೂ.ದಂಡ, ಸಾಮೂಹಿಕ ಮತಾಂತರ ಮಾಡಿದರೆ 3 ರಿಂದ 10 ವರ್ಷ ಶಿಕ್ಷೆ, 1ಲಕ್ಷ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಬಲವಂತದ ಮತಾಂತರಕ್ಕೆ ಬಲಿಯಾದರೆ ತಪ್ಪಿತಸ್ಥನಿಂದ 5 ಲಕ್ಷ ರೂ. ದಂಡ ವಸೂಲಿ ಮತ್ತು ನ್ಯಾಯಾಲಯದ ಶಿಕ್ಷೆಗೆ ಒಳಪಪಡಿಸಬೇಕು. ಮತಾಂತರದ ಉದ್ದೇಶದಿಂದ ಮದುವೆಯಾದರೆ ಅಸಿಂಧುಗೊಳ್ಳಲಿದೆ ಜಾಮೀನುರಹಿತ ಪ್ರಕರಣವಾಗಿರುತ್ತದೆ. ಮೂಲ ಮತದ ಎಲ್ಲ ಸೌಲಭ್ಯಗಳನ್ನು ಮತಾಂತರಗೊಂಡ ವ್ಯಕ್ತಿ ಕಳೆದುಕೊಳ್ಳಲಿದ್ದಾನೆ. ಆತ ಮತ್ತು ಆಕೆ ಹೊಸದಾಗಿ ಸೇರ್ಪಡೆಯಾದ ಧರ್ಮದಲ್ಲಿ ಪುನರ್ ವರ್ಗೀಕರಿಸಿ ದಾಖಲು ಮಾಡಲಾಗುತ್ತದೆ ಎಂದು ಆರಗ ಜ್ಞಾನೇಂದ್ರ ವಿವರಣೆ ನೀಡಿದರು.

ಭಾರತ ದೇಶದಲ್ಲಿ ಹಿಂದೂಧರ್ಮ ಎಲ್ಲ ಧರ್ಮದವರನ್ನು ಒಪ್ಪಿ, ಅಪ್ಪಿಕೊಂಡು ಸೌಹಾರ್ದದಿಂದ ಬದುಕುತ್ತಿದ್ದೇವೆ. ಇಂತಹ ಶ್ರೇಷ್ಟ  ಸಂಸ್ಕøತಿ ಒಡೆಯುವುದು ಸಲ್ಲ. ಮತಾಂತರ ಪಿಡುಗನ್ನು ತೊಲಗಿಸಲು ವಿಧೇಯಕ ತರಲಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿz

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News