ಎಂಇಎಸ್, ಶಿವಸೇನೆ ನಿಷೇಧಕ್ಕೆ ಒತ್ತಾಯ: ಡಿ.28ರಂದು ರಾಜ್ಯಾದ್ಯಂತ ಡಿಸಿ ಕಚೇರಿ ಮುತ್ತಿಗೆಗೆ ಕರವೇ ನಿರ್ಧಾರ
ಬೆಂಗಳೂರು, ಡಿ.23: ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿ ಪುಂಡಾಟ ಮೆರೆದ ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಲು ಡಿ.28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕರವೇ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಗುರುವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಎಂಇಎಸ್, ಶಿವಸೇನೆ ನಿಷೇಧಿಸುವುದು ಸೇರಿ ಹಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಡಿ.28ರಂದು ಡಿಸಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ. ಡಿಸಿ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಕರವೇ ತಮ್ಮ ಆಗ್ರಹ ಪತ್ರಗಳನ್ನು ಸಲ್ಲಿಸಲಿದೆ.
ಡಿ.30ರಂದು ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಆವರಣದಿಂದ ರಾಜಭವನದವರೆಗೆ ಬೃಹತ್ ಮೆರವಣಿಗೆ ನಡೆಸಿ, ರಾಜಭವನ ಮುತ್ತಿಗೆ ಹಾಕಲು ನಿರ್ಧರಿಸಲಾಯಿತು. ಎಂಇಎಸ್ ಮತ್ತು ಶಿವಸೇನೆ ನಿಷೇಧಕ್ಕಾಗಿ ಕ್ರಮಕೈಗೊಳ್ಳಲು ರಾಜ್ಯಪಾಲರನ್ನು ಒತ್ತಾಯಿಸಲಾಗುವುದು.
ಡಿ.31ರಂದು ಕೆಲವು ಸಂಘಟನೆಗಳು `ಕರ್ನಾಟಕ ಬಂದ್’ ಕರೆ ನೀಡಿವೆ. ಈ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವಿರುವುದಿಲ್ಲ ಎಂಬ ನಿರ್ಣಯ ಸೇರಿ ಇತರೆ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ನಾರಾಯಣಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.