ಬೆಳಗಾವಿ ಅಧಿವೇಶನ: ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿದ ಸ್ಪೀಕರ್

Update: 2021-12-24 12:48 GMT

ಬೆಳಗಾವಿ, ಡಿ.24: ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನವು ಬೆಳಗಾವಿನ ಸುವರ್ಣ ವಿಧಾನಸೌಧದಲ್ಲಿ ಡಿ.13 ರಿಂದ 24ರವರೆಗೆ 10 ದಿನಗಳ ಕಾಲ ನಡೆದಿದ್ದು, ಒಟ್ಟಾರೆ 52 ಗಂಟೆಗಳ ಕಾಲ ಕಾರ್ಯಕಲಾಪಗಳನ್ನು ನಡೆಸಲಾಗಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ. ಡಿ.15ರಂದು ನೂತನ ಸದಸ್ಯ ಶ್ರೀನಿವಾಸ ಮಾನೆ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಯಿತು.

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ 2020-21ನೆ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳ(ಸಂಪುಟ 1 ಮತ್ತು 2)ನ್ನು ಸದನದಲ್ಲಿ ಮಂಡಿಸಲಾಗಿದೆ. ಒಂದು ಹಕ್ಕುಚ್ಯುತಿ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗಿದೆ.

2021-22ನೆ ಸಾಲಿನ ಪೂರಕ ಅಂದಾಜುಗಳ ಎರಡನೆ ಕಂತು ಹಾಗೂ 2021-22ನೆ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಡಿ.17ರಂದು ಮಂಡಿಸಿದ್ದು, ಡಿ.23ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. 2018ನೆ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ)(ತಿದ್ದುಪಡಿ) ವಿಧೇಯಕವನ್ನು ಹಿಂಪಡೆಯಲಾಗಿದೆ.

ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕ ಸೇರಿದಂತೆ ಒಟ್ಟು 10 ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ. ಕನ್ನಡ ಬಾವುಟಕ್ಕೆ, ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪುತ್ಥಳಿಗಳಿಗೆ ಕಿಡಿಗೇಡಿಗಳು ಅಪಮಾನ ಮಾಡಿದ ಕೃತ್ಯವನ್ನು ಖಂಡಿಸಿ ಸದನವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.

ರಾಜ್ಯ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 2020-21ನೆ ಸಾಲಿನ ಐದನೇ, ಆರನೇ ಮತ್ತು ಏಳನೇ ವರದಿಗಳು ಮತ್ತು 23 ಅಧಿಸೂಚನೆಗಳು, 1 ಅಧ್ಯಾದೇಶ, 69 ವಾರ್ಷಿಕ ವರದಿಗಳು, 77 ಲೆಕ್ಕ ಪರಿಶೋಧನಾ ವರದಿಗಳು ಹಾಗೂ 1 ವಿಶೇಷ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ.

ನಿಯಮ 60ರಡಿಯಲ್ಲಿ ನೀಡಿದ್ದ 8 ನಿಲುವಳಿ ಸೂಚನೆಗಳನ್ನು ಪರಿವರ್ತಿಸಿರುವುದನ್ನು ಸೇರಿಸಿ 21 ಸೂಚನೆಗಳನ್ನು ನಿಯಮ 69ರಡಿಯಲ್ಲಿ ಸ್ವೀಕರಿಸಿದ್ದು, 5 ಸೂಚನೆಗಳನ್ನು ಚರ್ಚಿಸಲಾಗಿದೆ. ಈ ಪೈಕಿ ಅತಿವೃಷ್ಟಿ ಕುರಿತು ನಡೆದ ಚರ್ಚೆಯಲ್ಲಿ 37 ಸದಸ್ಯರು ಭಾಗವಹಿಸಿದ್ದು, 8 ಗಂಟೆ 38 ನಿಮಿಷಗಳ ಕಾಲ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ 13 ಸದಸ್ಯರು ಭಾಗವಹಿಸಿದ್ದು, 5 ಗಂಟೆ 45 ನಿಮಿಷಗಳ ಕಾಲ ಚರ್ಚಿಸಲಾಗಿದೆ.

ಒಟ್ಟು 2426 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಾಗಿದ್ದ 150 ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ ಉತ್ತರಿಸುವ 2032 ಪ್ರಶ್ನೆಗಳ ಪೈಕಿ 1921 ಪ್ರಶ್ನೆಗಳಿಗೆ ಉತ್ತರಗಳನ್ನು ಮಂಡಿಸಲಾಗಿದೆ. ಪ್ರಶ್ನೋತ್ತರಕ್ಕೆ ಸಂಬಂಧಿಸಿದಂತೆ ಶೇ.99ರಷ್ಟು ಸಾಧನೆಯಾಗಿದೆ. ನಿಯಮ 351ರಡಿಯಲ್ಲಿ 194 ಸೂಚನೆಗಳನ್ನು ಅಂಗೀಕರಿಸಿದ್ದು, 133 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ.

ಗಮನ ಸೆಳೆಯುವ 350 ಸೂಚನೆಗಳ ಪೈಕಿ 103 ಸೂಚನೆಗಳನ್ನು ಚರ್ಚಿಸಲಾಗಿದೆ ಹಾಗೂ ಮಂಡಿಸಲಾಗಿದೆ. ಒಟ್ಟಾರೆಯಾಗಿ 213 ಸೂಚನೆಗಳನ್ನು ಚರ್ಚಿಸಲಾಗಿದೆ. ಒಂದು ಅರ್ಜಿಯನ್ನು ಸದನಕ್ಕೆ ಒಪ್ಪಿಸಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸೆನೆಟ್‍ಗೆ ಮೂರು ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸದನವು ಸಭಾಧ್ಯಕ್ಷರಿಗೆ ಡಿ.22ರಂದು ಅಧಿಕಾರ ನೀಡಿದೆ.

ವಿಧಾನ ಮಂಡಲ ಅಧಿವೇಶನ ವಾರ್ಷಿಕ ಕನಿಷ್ಠ 60 ದಿನಗಳ ಕಾಲ ನಡೆಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ 60 ದಿನಗಳ ಕಾಲ ಅಧಿವೇಶನ ನಡೆಸಲು ಸಿಎಂಗೆ ಮನವಿ ಮಾಡುವೆ. ಈ ವರ್ಷ ಒಟ್ಟು 40 ದಿನಗಳ ಕಾಲ ಅಧಿವೇಶನ ನಡೆಸಿದ್ದು, ಈ ಅಧಿವೇಶನ ಕಲಾಪದಲ್ಲಿ ಸದಸ್ಯರ ಒಟ್ಟಾರೆ ಹಾಜರಾತಿ ಶೇ.73ರಷ್ಟಿತ್ತು. ಬೆಳಗಾವಿ ಸುವರ್ಣವಿಧಾನಸೌಧದಲ್ಲಿ ನಡೆದ 10 ದಿನಗಳ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಡೆದಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News