ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Update: 2021-12-24 12:45 GMT
ವಿದ್ಯಾರ್ಥಿ ಜೀವನ್‍ದಾಸ್

ಚಿಕ್ಕಮಗಳೂರು, ಡಿ.24: ಕಾಲೇಜಿಗೆ ತೆರಳಿ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಭದ್ರಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿರುವ ಘಟನೆ ಶುಕ್ರವಾರ ಜಿಲ್ಲೆಯ ಕಳಸ ಪಟ್ಟಣ ಸಮೀಪದ ಭದ್ರಾ ನದಿಯಲ್ಲಿ ವರದಿಯಾಗಿದೆ. 

ಮೃತರನ್ನು ಹಿರೇಬೈಲು ಗ್ರಾಮದ ಜೀವನ್‍ದಾಸ್(17) ಹಾಗೂ ಹೆಮ್ಮಕ್ಕಿ ಗ್ರಾಮದ ನಿಕ್ಷೇಪ(17) ಎಂದು ಗುರುತಿಸಲಾಗಿದ್ದು, ಪೊಲೀಸರು ಹಾಗೂ ಮುಳುಗು ತಜ್ಞರು ಯುವಕರಿಬ್ಬರ ಪೈಕಿ ಓರ್ವ ವಿದ್ಯಾರ್ಥಿಯ ಮೃತ ದೇಹವನ್ನು ಹೊರ ತೆಗೆದಿದ್ದಾರೆ. 

ಜೀವನ್‍ದಾಸ್ ಹಾಗೂ ನಿಕ್ಷೇಪ ಕಳಸ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಗುರುವಾರ ಕಳಸ ಪಟ್ಟಣದಲ್ಲಿರುವ ಕಾಲೇಜಿಗೆ ತೆರಳಿದ್ದ ಇಬ್ಬರು ಸ್ನೇಹಿತರು ರಾತ್ರಿಯಾದರೂ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಈ ವೇಳೆ ವಿದ್ಯಾರ್ಥಿಗಳ ಪೋಷಕರು ಕಳಸ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ನದಿ ತೀರದಲ್ಲಿ ಹುಡುಕಾಟ ಆರಂಭಿಸಿದ್ದ ವೇಳೆ ವಿದ್ಯಾರ್ಥಿಗಳ ಕಾಲೇಜು ಬ್ಯಾಗ್ ಭದ್ರಾ ನದಿ ತೀರದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಈಜಲು ತೆರಳಿ ನೀರು ಪಾಲಾಗಿರುವುದು ಬೆಳಕಿಗೆ ಬಂದಿದೆ.

ಶುಕ್ರವಾರ ಮಧ್ಯಾಹ್ನದ ವೇಳೆ ಪೊಲೀಸರು ಮುಳುಗುತಜ್ಞರ ತಂಡದೊಂದಿಗೆ ನದಿಯಲ್ಲಿ ಹುಡುಕಾಟ ಆರಂಭಿಸಿದಾಗ ಜೀವನ್ ದಾಸ್ ಎಂಬ ವಿದ್ಯಾರ್ಥಿಯ ಶವ ಪತ್ತೆಯಾಗಿದ್ದು, ನಿಕ್ಷೇಪನ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ನದಿಯಲ್ಲಿ ನಾಪತ್ತೆಯಾಗಿರುವ ವಿದ್ಯಾರ್ಥಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು ಗುರುವಾರ ಕಾಲೇಜಿಗೆ ಎಂದು ಕಳಸ ಪಟ್ಟಣಕ್ಕೆ ಬಂದಿದ್ದು, ಈ ವೇಳೆ ಕಾಲೇಜಿಗೆ ತೆರಳದೇ ತಮ್ಮ ಮತ್ತೋರ್ವ ಸ್ನೇಹಿತ¸ನೊಂದಿಗೆ ರುದ್ರಪಾದ ಎಂಬಲ್ಲಿ ಹರಿಯುತ್ತಿರುವ ಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿ ತನ್ನ ಗ್ರಾಮಕ್ಕೆ ತೆರಳುವ ಬಸ್ ಕೈತಪ್ಪುತ್ತದೆ ಎಂದು ಇಬ್ಬರು ಸ್ನೇಹಿತರನ್ನು ಬಿಟ್ಟು ನದಿ ತೀರದಿಂದ ಮನೆಗೆ ಹಿಂದಿರುಗಿದ್ದ ಎನ್ನಲಾಗುತ್ತಿದ್ದು, ನದಿಗೆ ಇಳಿದಿದ್ದ ಜೀವನ್‍ದಾಸ್ ಹಾಗೂ ನಿಕ್ಷೇಪ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಆಳ ಅರಿಯದೇ ಮುಳುಗಿದ್ದು, ಈ ವೇಳೆ ನದಿಯ ನೀರಿನ ರಭಸದಿಂದಾಗಿ ಈಜಲು ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ನದಿ ತೀರದಲ್ಲಿ ವಿದ್ಯಾರ್ಥಿಗಳ ಕಾಲೇಜು ಬ್ಯಾಗ್‍ನೊಂದಿಗೆ ಬಿಯರ್ ಬಾಟಲಿ, ಸಿಗರೇಟ್ ಪ್ಯಾಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. 

ಕಾಲೇಜು ವಿದ್ಯಾರ್ಥಿಗಳು ಭದ್ರಾ ನದಿಯಲ್ಲಿ ನೀರು ಪಾಲಾದ ಸುದ್ದಿ ತಿಳಿಯುತ್ತಿದ್ದಂತೆ ಕಳಸ ಪೊಲೀಸರು ಶುಕ್ರವಾರ ಮುಳುಗು ತಜ್ಞರೊಂದಿಗೆ ಯುವಕರಿಬ್ಬರಿಗಾಗಿ ನದಿಯಲ್ಲಿ ಹುಡುಕಾಟ ಆರಂಭಿಸಿದ್ದು, ಸುಮಾರು 2 ಗಂಟೆಗಳ ಕಾಲ ಶೋಧ ಕಾರ್ಯದ ಬಳಿಕ ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕಳಸ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜನರು ನದಿ ತೀರದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಸ್ಥಳದಲ್ಲಿ ಮೃತ ಯುವಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಪಟ್ಟಣ ಸಮೀಪದ ರುದ್ರಪಾದ ಎಂಬಲ್ಲಿ ಹರಿಯುವ ಭದ್ರಾ ನದಿ ಅಪಾಯಕಾರಿ ಸ್ಥಳವಾಗಿದ್ದು, ಪದೇ ಪದೇ ಈ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಇಲ್ಲಿ ನದಿಗೆ ಇಳಿಯುವುದನ್ನು ನಿಷೇದಿಸದಿರುವುದು ಹಾಗೂ ಅಪಾಯಕಾರಿ ಸ್ಥಳಗಳ ಬಗ್ಗೆ ನಾಮಫಲಕ ಹಾಕದಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News