×
Ad

ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಕಡಿವಾಣ: ಸಚಿವ ಬೈರತಿ ಬಸವರಾಜ್

Update: 2021-12-24 18:35 IST
ಸಚಿವ ಬೈರತಿ ಬಸವರಾಜ್

ಬೆಳಗಾವಿ, ಡಿ. 24: ಸಂಘ-ಸಂಸ್ಥೆಗಳು ಅನಧಿಕೃತ ಬಡಾವಣೆ ನಿರ್ಮಾಣ ಮಾಡುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ತನ್ವೀರ್ ಸೇಠ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಖಾಸಗಿ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು ಖಾಸಗಿ ಬಡಾವಣೆ ನಿರ್ಮಾಣದಾರರ ಜವಾಬ್ದಾರಿ.

ಆದರೆ, ನಗರಸಭೆಗೆ ಹೊಂದಿಕೊಂಡಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಪಡೆದು ಅನಧಿಕೃತ ಬಡಾವಣೆ ನಿರ್ಮಾಣ ಮಾಡುತ್ತಿದ್ದು, ಮೂಲಭೂತ ಸೌಲಭ್ಯ ಕಲ್ಪಿಸದೆ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆರಂಭಕ್ಕೆ ಮಾತನಾಡಿದ ಸದಸ್ಯ ತನ್ವೀರ್ ಸೇಠ್, ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಸರಕಾರ ಕಡಿವಾಣ ಹಾಕಬೇಕು. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳು ಅನಧಿಕೃತ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿದ್ದಾರೆ. ಆದರೆ, ಅಗತ್ಯ ಮೂಲಸೌಲಭ್ಯ ಕಲ್ಪಿಸದಿರುವ ಕಾರಣ ಜನರಿಗೆ ಸಮಸ್ಯೆಯಾಗಿದೆ ಎಂದು ಗಮನ ಸೆಳೆದರು.

ಇದಕ್ಕೆ ಧ್ವನಿಗೂಡಿಸಿದ ಸ್ಪೀಕರ್ ಕಾಗೇರಿ, ನಗರಸಭೆಗೆ ಹೊಂದಿಕೊಂಡಿರುವ ಗ್ರಾ.ಪಂ.ಗಳ ಅನುಮತಿ ಪಡೆದು ಸಂಘ-ಸಂಸ್ಥೆಗಳು ಅನಧಿಕೃತ ಬಡಾವಣೆ ನಿರ್ಮಿಸಿ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಒಟ್ಟಿಗೆ ಸೇರಿ ಪರಿಹಾರ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News