ಮಂಡ್ಯ: ಶಾಲೆಯಲ್ಲಿ ನಡೆಯುತ್ತಿದ್ದ ಕ್ರಿಸ್ಮಸ್ ಆಚರಣೆಗೆ ಸಂಘಪರಿವಾರದ ಕಾರ್ಯಕರ್ತರಿಂದ ತಡೆ

Update: 2021-12-24 14:09 GMT

ಮಂಡ್ಯ: ಮಂಡ್ಯ ಜಿಲ್ಲೆಯ ಶಾಲೆಯೊಂದರಲ್ಲಿ ಗುರುವಾರ ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಿದ ಸಂಘಪರಿವಾರದ ಗುಂಪೊಂದು ಶಾಲಾ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ದೃಶ್ಯವು ವೀಡಿಯೊದಲ್ಲಿ ಸೆರೆಯಾಗಿದೆ. 

ನಿರ್ಮಲಾ ಇಂಗ್ಲಿಷ್ ಹೈಸ್ಕೂಲ್ ಹಾಗೂ  ಕಾಲೇಜಿನ ಮುಖ್ಯೋಪಾಧ್ಯಾಯಿನಿ ಪ್ರಕಾರ, ವಿದ್ಯಾರ್ಥಿಗಳು ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿದ್ದಾಗ ಸಂಘಪರಿವಾರದ ಸದಸ್ಯರು ಬಲವಂತವಾಗಿ ಸಂಸ್ಥೆಯೊಳಗೆ ಪ್ರವೇಶಿಸಿದ್ದರು ಎಂದು ಎಂದು NDTV ವರದಿ ಮಾಡಿದೆ. 

"ನಾವು ಪ್ರತಿ ವರ್ಷ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸುತ್ತಿದ್ದೇವೆ. ಆದರೆ ಕೋವಿಡ್ ಪ್ರೇರಿತ ನಿರ್ಬಂಧಗಳಿಂದ ಅದನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ನಾವು ಸಣ್ಣ ಆಚರಣೆಯನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಹಣ ಸಂಗ್ರಹಿಸಿ ಕೇಕ್ ಅನ್ನು ಆರ್ಡರ್ ಮಾಡಿದ್ದರು. ಇದಕ್ಕೆ ಪೋಷಕರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ'' ಎಂದು ಮುಖ್ಯೋಪಾಧ್ಯಾಯಿನಿ ಕನಿಕಾ ಫ್ರಾನ್ಸಿಸ್ ಮೇರಿ NDTV ಗೆ ತಿಳಿಸಿದ್ದಾರೆ.

ಶಾಲೆಯು 'ಕ್ರೈಸ್ತ ಧರ್ಮವನ್ನು ಬೋಧಿಸುತ್ತಿದೆ' ಹಾಗೂ  ಕ್ರಿಸ್ಮಸ್ ಅನ್ನು ಆಚರಿಸುತ್ತಿದೆ. ಆದರೆ ಹಿಂದೂ ಹಬ್ಬಗಳನ್ನು ಆಚರಿಸುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬನ ಪೋಷಕರು ಸಂಘಪರಿವಾರಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. 

ಆಚರಣೆಯ ಬಗ್ಗೆ ತಿಳಿದ ನಂತರ, ಸಂಘಪರಿವಾರದ ಕಾರ್ಯಕರ್ತರು ವಿದ್ಯಾ ಸಂಸ್ಥೆಗೆ ನುಗ್ಗಿ ಶಾಲೆಯ ಆಡಳಿತವನ್ನು ಪ್ರಶ್ನಿಸಲು ಆರಂಭಿಸಿದರು. ಗಲಾಟೆಯನ್ನು ಸೆರೆಹಿಡಿದಿರುವ ವೀಡಿಯೊದಲ್ಲಿ ಕೆಲವರು ಹಿಂದೂ ಹಬ್ಬಗಳನ್ನು ಏಕೆ ಆಚರಿಸುತ್ತಿಲ್ಲ ಎಂದು ಶಾಲಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಶಾಲೆಯ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ  ಕಾರ್ಯಕರ್ತನೊಬ್ಬ, "ಪೋಷಕರೇ ನಾವು ಈ ನಿರ್ಧಾರವನ್ನು ನಿಮಗೆ ಬಿಡುತ್ತೇವೆ. ನಾವು ಇದನ್ನು ನಮ್ಮ ಕೈಗೆತ್ತಿಕೊಂಡರೆ ಪರಿಸ್ಥಿತಿ ವಿಭಿನ್ನವಾಗಿರುತ್ತದೆ" ಎಂದು ಹೇಳುತ್ತಿರುವುದು ವೀಡಿಯೊದಲ್ಲಿದೆ. 

ಶಾಲಾ ಆಡಳಿತ ಮಂಡಳಿಯು ಘಟನೆಯ ಕುರಿತು ಇಂದು ದೂರು ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News