ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ವಿಶೇಷ ಕಾರ್ಯಕ್ರಮ: ಸಿಎಂ ಬೊಮ್ಮಾಯಿ ಭರವಸೆ

Update: 2021-12-25 18:17 GMT

ಹುಬ್ಬಳ್ಳಿ, ಡಿ. 25: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಶತಮಾನೋತ್ಸವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿನ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಆಯೋಜಿಸಲಾಗಿದ್ದ `ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ'ದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಘದ ಗತವೈಭವ ಮರುಕಳಿಸಬೇಕು. ಶತಮಾನದಿಂದ ಈ ಸಂಸ್ಥೆಯನ್ನು ಉಳಿಸಿಕೊಂಡು ಬಂದಿದ್ದು, ರೈತರ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.

ಈ ಪ್ರತಿಷ್ಠಿತ ಸಂಸ್ಥೆ ರೈತರ ಆಸ್ತಿ. ಆ ಪ್ರತಿಷ್ಠೆಯನ್ನು ಮತ್ತು ರೈತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ವಿಶೇಷ ಕಾಳಜಿ, ಮತ್ತು ಮುತುವರ್ಜಿ ವಹಿಸಬೇಕು ಇದರೊಂದಿಗೆ ನಾನು ಸಹ ಈ ಸಂಸ್ಥೆಯ ಜೊತೆಗೆ ಸರಕಾರ ಇರಲಿದೆ. ಒಬ್ಬ ವ್ಯಕ್ತಿ 100 ವರ್ಷ ಉಳಿಯಬಹುದು, ಆದರೆ, ಒಂದು ಸಂಸ್ಥೆಯನ್ನು 100 ವರ್ಷ ಉಳಿಸಿಕೊಂಡು ಬರುವುದು ಬಹಳ ಕಷ್ಟ. ಇಂದಿನ ಖಾಸಗಿಕರಣ, ಜಾಗತಿಕರಣ ಹಾಗೂ ಆಧುನಿಕರಣ ನಡುವೆಯೂ ಸಹಕಾರಿ ಸಂಸ್ಥೆಯನ್ನು ಉಳಿಸಿಕೊಂಡು ಬಂದಿರುವುದು ಪರಿಶ್ರಮದ ಪರಿಣಾಮ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರ ವಿಷಯ ಬಂದಾಗ, ರೈತರ ಸಮಸ್ಯೆ ವಿಷಯ ಬಂದಾಗ ಬೇರೆಲ್ಲವನ್ನು ಮರೆತು ನಾವು ಒಗ್ಗಟಾಗಿ ಕೆಲಸ ಮಾಡೋಣ. ಸಂಸ್ಥೆ ಬೆಳೆದರೆ ರೈತರಿಗೆ ಅನುಕೂಲವಾಗುವುದು. ಸಂಸ್ಥೆಯಿಂದ ನಾವು-ನಿವೆಲ್ಲರೂ ಬೆಳೆದಿದ್ದೇವೆ, ರಾಜಕೀಯವಾಗಿಯೂ ಬೆಳೆದಿದ್ದೇವೆ. ಈ ಸಂಸ್ಥೆಯನ್ನು ಬೆಳೆಸಲು ನಾವು-ನೀವು ಮರಳಿ ಏನನ್ನಾದರೂ ನೀಡುವ ಚಿಂತನೆಯನ್ನು ಮಾಡಬೇಕಿದೆ ಎಂದು ಅವರು ನುಡಿದರು.

ಇದು ನನ್ನ ಸಂಸ್ಥೆ, ಈ ಸಂಸ್ಥೆಗೆ ಸರಕಾರದಿಂದ ನೀಡಬೇಕಾಗಿರುವ ಸಹಾಯ-ಸಹಕಾರವನ್ನು ಸರಕಾರದಿಂದ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸಂಸ್ಥೆಯವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದು ಎಂದು ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News