×
Ad

ವರ್ಷಾಂತ್ಯಕ್ಕೆ ಎಲ್ಲರಿಗೂ ಲಸಿಕೆ; ಗುರಿ ಸಾಧಿಸಲು ರಾಜ್ಯ ವಿಫಲ: ಅಂಕಿ ಅಂಶ

Update: 2021-12-26 08:28 IST
ಸಾಂದರ್ಭಿಕ ಚಿತ್ರ

ಬೆಂಗಳೂರು: ವರ್ಷಾಂತ್ಯದ ಒಳಗಾಗಿ ರಾಜ್ಯದಲ್ಲಿ ಎಲ್ಲ ವಯಸ್ಕರಿಗೆ ಕೋವಿಡ್-19 ವಿರುದ್ಧದ ಲಸಿಕೆ ನೀಡಿಕೆ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಘೋಷಿಸಿದ್ದರೂ, ಈ ಗುರಿ ಸಾಧನೆಗೆ ಇನ್ನೂ ಸುಧೀರ್ಘ ದಾರಿ ಕ್ರಮಿಸಬೇಕಿದೆ ಎನ್ನುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.

ಡಿಸೆಂಬರ್ ಕೊನೆಯ ಒಳಗಾಗಿ ಎಲ್ಲ ಅರ್ಹ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಗಸ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಆದರೆ ವರ್ಷಾಂತ್ಯದ ಮೈಲುಗಲ್ಲು ಸನಿಹವಾಗುತ್ತಿದ್ದು, ಅಂಕಿ ಅಂಶ ಮಾತ್ರ ಬೇರೆಯೇ ಕಥೆ ಹೇಳುತ್ತದೆ.

ಶನಿವಾರ ಸಂಜೆಯ ವೇಳೆಗೆ ರಾಜ್ಯದಲ್ಲಿ ಮೊದಲ ಡೋಸ್ ಪಡೆದ ಅರ್ಹ ಜನಸಂಖ್ಯೆ ಶೇಕಡ 96.89ರಷ್ಟಿದೆ. ಎರಡೂ ಡೋಸ್‌ಗಳನ್ನು ಪಡೆದವರ ಪ್ರಮಾಣ ಶೇಕಡ 75.96 ಆತ್ರ ಆಗಿದೆ. ಆತಂಕಕಾರಿ ವಿಚಾರವೆಂದರೆ ಶೇಕಡ 3.1 ರಷ್ಟು ಮಂದಿ ಒಂದು ಡೋಸ್ ಕೂಡಾ ಲಸಿಕೆ ಪಡೆದಿಲ್ಲ. ಇದರಲ್ಲಿ 1.34 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು 54.1 ಲಕ್ಷ ಮಂದಿ 18 ರಿಂದ 44 ವರ್ಷ ವಯಸ್ಸಿನವರು ಸೇರಿದ್ದಾರೆ.

ಲಸಿಕೆ ಪಡೆಯಲು ಹಿಂಜರಿಕೆಯೇ ಹಿನ್ನಡೆಗೆ ಪ್ರಮುಖ ಕಾರಣ ಎನ್ನುವುದು ಜಿಲ್ಲಾಮಟ್ಟದ ಅಧಿಕಾರಿಗಳ ಹೇಳಿಕೆ. ಉದಾಹರಣೆಗೆ ಕಲ್ಬುರ್ಗಿ ಜಿಲ್ಲೆಯಲ್ಲಿ ಶೇಕಡ 95ರಷ್ಟು ಮಂದಿ ಮಾತ್ರ ಮೊದಲ ಡೋಸ್ ಪಡೆದಿದ್ದು, ಎರಡೂ ಡೋಸ್ ಪಡೆದವರ ಪ್ರಮಾಣ ಕೇವಲ ಶೇಕಡ 65ರಷ್ಟು. ಮೊದಲ ಡೋಸ್ ಪಡೆಯಲು ಹಿಂಜರಿಕೆ ಇದ್ದ ಕಾರಣ ಮೊದಲ ಡೋಸ್ ನೀಡಿಕೆ ವಿಳಂಬವಾಗಿದೆ. ಇದರಿಂದಾಗಿ ಎರಡನೇ ಡೋಸ್ ಪೂರ್ಣಗೊಂಡವರ ಸಂಖ್ಯೆ ಕಡಿಮೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಾಣಜಾಲಖೇಡ್ ಹೇಳಿದ್ದಾರೆ.

ಕೇವಲ ನಾಲ್ಕು ಲಕ್ಷ ಜನಸಂಖ್ಯೆ ಹೊಂದಿರುವ ಕೊಡಗಿನಂಥ ಪುಟ್ಟ ಜಿಲ್ಲೆಯಲ್ಲೂ ಶೇಕಡ 100ರ ಗುರಿ ಸಾಧನೆಯಾಗಿಲ್ಲ. ಮೊದಲ ಡೋಸ್ ಶೇಕಡ 100ರಷ್ಟು ಸಾಧನೆಯಾಗಿದ್ದರೂ, ಎರಡನೇ ಡೋಸ್ ಪಡೆದವರು ಶೇಕಡ 92ರಷ್ಟು ಮಂದಿ ಮಾತ್ರ. ಇಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ, ಪ್ರದೇಶ ವಿಸ್ತಾರವಾಗಿರುವುದರಿಂದ ಶೇಕಡ 100ರಷ್ಟು ಮಂದಿಗೆ ಲಸಿಕೆ ನೀಡಿಕೆ ಸಾಧ್ಯವಾಗಿಲ್ಲ. ಲಸಿಕೆ ಹಿಂಜರಿಕೆಯನ್ನು ಪತ್ತೆ ಮಾಡುವ ಉದ್ದೇಶದಿಂದ ಆಶಾ ಕಾರ್ಯಕರ್ತೆಯರು ಎಲ್ಲ ಮನೆ ಮನೆಗೆ ಭೇಟಿ ನೀಡುವುದು ಸಾಧ್ಯವಾಗುತ್ತಿಲ್ಲ ಎಂದು ಡಿಎಚ್‌ಓ ಡಾ.ವೆಂಕಟೇಶ್ ವಿವರಿಸಿದ್ದಾರೆ.

ರಾಯಚೂರು ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಮೊದಲ ಡೋಸ್‌ನಲ್ಲಿ ಶೇಕಡ 92ರಷ್ಟು ಸಾಧನೆಯಾಗಿದ್ದರೆ, ಎರಡನೇ ಡೋಸ್ ಪಡೆದವರು ಶೇಕಡ 58ರಷ್ಟು ಮಂದಿ ಮಾತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News