×
Ad

ಡಿ.28ರಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ, ಮಾರ್ಗಸೂಚಿ ಪ್ರಕಟ

Update: 2021-12-26 13:35 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 26: ಕೋವಿಡ್-19 ರೂಪಾಂತರಿ ಒಮೈಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಕಾರಣದಿಂದ ಡಿ.28ರಿಂದ ಹತ್ತು ದಿನಗಳ ಕಾಲ ರಾಜ್ಯಾದ್ಯಂತ ರಾತ್ರಿ (ನೈಟ್) ಕರ್ಫ್ಯೂಹೇರಲು ರಾಜ್ಯ ಸರಕಾರ ತೀರ್ಮಾನಿಸಿದೆ.

ರವಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ನೈಟ್ ಕರ್ಫ್ಯೂಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನ ನಿಯಮ ಪಾಲಿಸಲು ಸೂಚನೆ ನೀಡಲಾಗಿದೆ.

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, `ಡಿ.28ರಿಂದ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂಜಾರಿಗೊಳಿಸಲು ನಿರ್ಧರಿಸಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಆಧರಿಸಿ 10 ದಿನಗಳ ನೈಟ್ ಕರ್ಫ್ಯೂಹೇರಿದ್ದು, ಮುಂದಿನ ದಿನದಲ್ಲಿ ಪರಿಸ್ಥಿತಿಯನ್ನು ಆಧರಿಸಿ ತೀರ್ಮಾನ ಮಾಡಲಾಗುವುದು' ಎಂದು ತಿಳಿಸಿದರು.

ಹೊಸ ವರ್ಷಾಚರಣೆಗೆ ನಿರ್ಬಂಧ: ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಸಂಪೂರ್ಣ ನಿಷೇಧಿಸಲಾಗಿದೆ. ಹೊಟೇಲ್, ರೆಸ್ಟೋರೆಂಟ್, ಪಬ್, ಬಾರ್ ಮತ್ತು ಕ್ಲಬ್‍ಗಳಲ್ಲಿ ಒಟ್ಟಾರೆ ಸಾಮಥ್ರ್ಯದ ಶೇ.50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇತರೆ ಚಟುವಟಿಕೆ ಮತ್ತು ಉದ್ಯಮಗಳಿಗೆ ಸದ್ಯಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ ಎಂದು ಡಾ.ಸುಧಾಕರ್ ಸ್ಪಷ್ಟಣೆ ನೀಡಿದರು.

ಯುವಜನರಿಗೆ ಲಸಿಕೆ: ರಾಜ್ಯದಲ್ಲಿ ಶೇ.97ರಷ್ಟು ಮಂದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಶೇ.3ರಷ್ಟು ಮಂದಿ ಮೊದಲ ಡೋಸ್ ಪಡೆಯುವುದು ಬಾಕಿಯಿದ್ದು, ಶೇ.72ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ರಾಜ್ಯದಲ್ಲಿ 15 ರಿಂದ 18 ವರ್ಷ ವಯೋಮಾನದ 43 ಲಕ್ಷ ಮಕ್ಕಳು, ಯುವ ಜನರಿದ್ದಾರೆ. ಅವರಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರು ಮತ್ತು ತೀವ್ರ ಸ್ವರೂಪದ ಅನಾರೋಗ್ಯದ ಸಮಸ್ಯೆ ಇರುವವರಿಗೆ `ಬೂಸ್ಟರ್ ಡೋಸ್' ನೀಡುವುದಕ್ಕೂ ತಯಾರಿ ಮಾಡಲಾಗುತ್ತಿದೆ. ದೇಶದಲ್ಲಿ ಒಮೈಕ್ರಾನ್ ತಳಿಯ ಕೋವಿಡ್ ವೈರಾಣು ಸೋಂಕಿನ 400ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾದರೆ ಹೇಗೆ ಎದುರಿಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.

4 ಸಾವಿರ ಹಾಸಿಗೆ ಸಿದ್ಧ: ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಒಮೈಕ್ರಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸದ್ಯ 4 ಸಾವಿರ ಐಸಿಯು ಹಾಸಿಗೆಗಳಿವೆ. 7,500 ಹಾಸಿಗೆಗಳನ್ನು ಐಸಿಯು ಹಾಸಿಗೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಒಮೈಕ್ರಾನ್ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಕೋವಿಡ್ ಮಾರ್ಗಸೂಚಿ ಅನುಸರಿಸುವ ಮೂಲಕ ಸೋಂಕು ಹರಡುವಿಕೆ ತಡೆಗಟ್ಟಲು ಸಹಕರಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಎಂ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಾರ್ಗಸೂಚಿ: ಡಿ.28ರಿಂದ 2022ರ ಜನವರಿ 7ರ ವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ರಾತ್ರಿ(ನೈಟ್) ಕಫ್ರ್ಯೂ. ಡಿ. 30ರಿಂದ 2022ರ ಜನವರಿ 2ರ ವರೆಗೂ ರೆಸ್ಟೋರೆಂಟ್, ಬಾರ್, ಪಬ್ ಹಾಗೂ ಹೊಟೇಲ್‍ಗಳಲ್ಲಿ ಒಟ್ಟು ಸಾಮಥ್ರ್ಯದ ಶೇ.50ರಷ್ಟು ಆಸನಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಮದುವೆ ಸೇರಿದಂತೆ ಇತರೆ ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವವರ ಸಂಖ್ಯೆ 300 ಮಂದಿಗೆ ಮೀರುವಂತಿಲ್ಲ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗಗಳಲ್ಲಿ ಒಮೈಕ್ರಾನ್ ಸೋಂಕು ತಡೆಗೆ ಕಠಿಣ ನಿಗಾವಹಿಸುವುದು ಎಂದು ಸೂಚಿಸಲಾಗಿದೆ.

ನಿರ್ಬಂಧ: ಆರೋಗ್ಯ ಸಂಬಂಧದ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಉಳಿದಂತೆ ಸಾರ್ವಜನಿಕರ ಸಂಚಾರಕ್ಕೆ ಡಿ.28ರಿಂದ 2022ರ ಜ.7ರ ವರೆಗೆ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೂ ನಿರ್ಬಂಧ ಹೇರಲಾಗಿದೆ. ರೋಗಿಗಳು ಮತ್ತು ಅವರ ಸಹಾಯಕರ ತುರ್ತು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಗಳಲ್ಲಿ ರಾತ್ರಿ ಪಾಳಿಯ ಉದ್ಯೋಗಿಗಳು ಕಂಪೆನಿಯ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದೆ.

ಅಗತ್ಯ ಸೇವೆಗಳ ಅಡಿಯಲ್ಲಿನ ಇಂಟರ್‍ನೆಟ್ ಸೇವೆಗಳು ಮತ್ತು ದೂರಸಂಪರ್ಕ ಸೇವೆ ಕಂಪೆನಿಗಳ ಉದ್ಯೋಗಿಗಳು, ವಾಹನಗಳ ಸಂಚಾರಕ್ಕೆ ಅವಕಾಶವಿದ್ದರೂ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ. ವೈದ್ಯಕೀಯ, ಔಷಧ ಮಳಿಗೆಗಳು ಸೇರಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಸಾರಿಗೆ ಬಸ್ಸು, ಮೆಟ್ರೋ ರೈಲು, ಬಸ್, ರೈಲ್ವೆ ನಿಲ್ದಾಣದಿಂದ ನಿಗದಿತ ಸ್ಥಳಗಳಿಗೆ ತೆರಳಲು(ಟಿಕೆಟ್ ಹೊಂದಿರುವುದು ಕಡ್ಡಾಯ) ಹಾಗೂ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News