ನೀರು ವ್ಯರ್ಥವಾಗದಂತೆ ತಡೆಯಲು ಏಕಾಂಗಿಯಾಗಿ ಶ್ರಮದಾನ ಮಾಡಿದ ರೈತ: ಜಸ್ಟಿಸ್ ಗೋಪಾಲಗೌಡರಿಂದ ಸನ್ಮಾನ
ಬೆಂಗಳೂರು: ಕೆರೆ ತುಂಬಿ ಕೋಡಿ ಹರಿದು ಪೋಲಾಗುತ್ತಿದ್ದ ನೀರನ್ನು ಏಕಾಂಗಿಯಾಗಿ ಶ್ರಮದಾನ ಮಾಡಿ ಮಣ್ಣನ್ನು ಹಾಕಿ ಏರಿ ಕಟ್ಟಿ ನೀರನ್ನು ಉಳಿಸುವ ಮೂಲಕ ಕದಿರಪ್ಪನಾಯಕನಕೋಟೆಯ ಮುನಿಸ್ವಾಮಿರೆಡ್ಡಿ ಎಂಬ ರೈತ ಸುದ್ದಿಯಾಗಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ಕಂಡ ಜಸ್ಟಿಸ್ ವಿ. ಗೋಪಾಲ ಗೌಡರು, ರೈತ ರೆಡ್ಡಿಯವರನ್ನು ಮನೆಗೆ ಕರೆಸಿಕೊಂಡು ಸನ್ಮಾನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 6:30 ಕ್ಕೆ ಏಕಾಂಗಿಯಾಗಿ ಕೆರೆಯ ಬದಿಗೆ ಬಂದು ಮಣ್ಣಿನ ತಡೆಯನ್ನು ನಿರ್ಮಿಸುತ್ತಿದ್ದ ಇವರ ಕೆಲಸ ಕಾರ್ಯಗಳು ಉರಿಬಿಸಿಲಿನ ನಡುವೆಯೂ ಮಧ್ಯರಾತ್ರಿಯವರೆಗೂ ಮುಂದುವರೆದಿತ್ತು. ನೀರು ಪೋಲಾಗದಂತೆ ಸಾಧ್ಯವಾದಷ್ಟು ಉಳಿಸಿಕೊಳ್ಳಬೇಕು ಎಂಬುವುದು ಮಾತ್ರ ಅವರ ನಿರ್ಧಾರವಾಗಿತ್ತು.
ಪೆದ್ದೂರು ಗ್ರಾಮದಲ್ಲಿರುವ ಬಪ್ಪನಕೆರೆ ತೊಟ್ಟಿಯ ನೀರು ಹೆಚ್ಚಾಗಿ ಹರಿದು ಪೋಲಾಗುತ್ತಿದ್ದುದನ್ನು ತಡೆದ ಈ ರೈತನ ಕಾರ್ಯವನ್ನು ಕಂಡ ಜಸ್ಟಿಸ್ ವಿ. ಗೋಪಾಲಗೌಡರು, ಅವರ ಕೆಲಸ ಕಾರ್ಯಗಳ ಬಗ್ಗೆ ಸ್ಥಳಕ್ಕೆ ತೆರಳಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಿದ್ದಾರೆ. "ಅವರ ಈ ನಿಸ್ವಾರ್ಥ ಸೇವೆಯನ್ನು ನಾವೆಲ್ಲ ಮಾದರಿಯಾಗಿಸಿಕೊಳ್ಳಬೇಕು. ಅವರು ಯುವಕರಿಗೆ ಮಾದರಿಯಾಗಿದ್ದಾರೆ. ಅಶಿಕ್ಷಿತರಾಗಿದ್ದರೂ ಪರಿಸರದ ಮತ್ತು ಸಮಾಜದ ಒಳಿತಿನ ದೃಷ್ಟಿಯಿಂದ ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯ" ಎಂದು ವಿ. ಗೋಪಾಲಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.