ಸಿಎಂ ಬದಲಾವಣೆ ಚರ್ಚೆ ಆಗುತ್ತಿರುವುದು ನಿಜ: ಸಚಿವ ಮುರುಗೇಶ್ ನಿರಾಣಿ

Update: 2021-12-26 11:24 GMT
ಸಚಿವ ಮುರುಗೇಶ್ ನಿರಾಣಿ

ಬಾಗಲಕೋಟೆ, ಡಿ. 25: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಆಗುತ್ತಿದೆ ನಿಜ. ಆದರೆ, ನಾನು ಎಲ್ಲೂ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಮ್ಮ ನಡುವೆ 30 ವರ್ಷದ ಕುಟುಂಬ ಸಂಬಂಧವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸ್ನೇಹಿತರು ಅಥವಾ ಮಾಧ್ಯಮದವರ ಮುಂದೆ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಹೇಳಿದ್ದರೆ ಕೇಳಿಕೊಳ್ಳಿ, ಸುಮ್ಮನೆ ಯಾರಾದರೂ ಹೇಳಿದ್ದರೆ, ನನ್ನನ್ನೇಕೆ ಅದಕ್ಕೆ ಹೊಣೆಗಾರನನ್ನಾಗಿ ಮಾಡುತ್ತಿದ್ದೀರಿ ಎಂದು ಇದೇ ಸಂದರ್ಭದಲ್ಲಿ ಖಾರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಸೇರಿ ಕೆಲ ಬಿಜೆಪಿ ನಾಯಕರ ಹೊಟೇಲ್ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿರಾಣಿ, ಹೊಟೇಲ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಈಶ್ವರಪ್ಪ ಸೇರಿ ಎಲ್ಲ ಮಂತ್ರಿಗಳು ಹಾಗೂ ನಾನು ಒಂದೇ ಹೊಟೇಲ್‍ನಲ್ಲಿದ್ದೆವು. ಆದರೆ, ಬಸವರಾಜ ಬೊಮ್ಮಾಯಿಯವರು ನನ್ನ ಹಿರಿಯಣ್ಣನಿದ್ದಂತೆ. ಕಾರ್ಖಾನೆ ವಿಷಯ ಸೇರಿದಂತೆ ವೈಯಕ್ತಿಕ ವಿಷಯಗಳ ಬಗ್ಗೆ ಮೊದಲು ಹೇಳುವುದು ಬೊಮ್ಮಾಯಿ ಅವರಿಗೆ. ಅವರ ಮನೆಗೆ ಹೋದರೆ ಚಹಾ ಕುಡಿಯದೇ ಹೋಗುತ್ತಿರಲಿಲ್ಲ ಎಂದು ವಿವರಣೆ ನೀಡಿದರು.

ಸಚಿವ ಸಂಪುಟದ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮುಖ್ಯಮಂತ್ರಿಯವರ ಪರಮಾಧಿಕಾರ ಇದೆ. ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಪಕ್ಷದ ಮುಖಂಡರು, ರಾಜ್ಯ ಮುಖಂಡರು, ರಾಷ್ಟ್ರೀಯ ನಾಯಕರು, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಮುರುಗೇಶ್ ಆರ್.ನಿರಾಣಿ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News