×
Ad

ಪತ್ರಕರ್ತ ಪಿ.ಕೆ.ಮಲ್ಲನಗೌಡರ್ ನಿಧನ

Update: 2021-12-26 17:53 IST
ಮಲ್ಲನಗೌಡರ್ 

ಬೆಂಗಳೂರು, ಡಿ.26: ಜನಪರ ಹೋರಾಟಗಳೊಂದಿಗೆ ಗುರುತಿಸಿಕೊಂಡಿದ್ದ, ನೊಂದವರ ಪರವಾಗಿದ್ದ ಪತ್ರಕರ್ತ ಪಿ.ಕೆ. ಮಲ್ಲನಗೌಡರ್ ಶನಿವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ, ಮಹಡಿಯಿಂದ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ 9.45ರ ಸಮಯದಲ್ಲಿ ಶೇಷಾದ್ರಿಪುರಂನಲ್ಲಿನ ಕಟ್ಟಡವೊಂದರಿಂದ ಬಿದ್ದ ನಂತರ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಗದಗದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮೂಲತಃ ಗದಗಿನವರಾದ ಮಲ್ಲನಗೌಡರ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದು,  ಪತ್ರಕರ್ತನಾಗಬೇಕೆಂದು ಸಾಫ್ಟ್‍ವೇರ್ ಕಂಪನಿಯ ಕೆಲಸ ತೊರೆದಿದ್ದರು. ವಿಕ್ರಾಂತ ಕರ್ನಾಟಕ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್, ನಾನುಗೌರಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಪ್ರತಿಧ್ವನಿ ವೆಬ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮಲ್ಲನಗೌಡರ್ ಅವರು ಬಹಳಷ್ಟು ವಿಷಯಗಳಲ್ಲಿ ಪರಿಣಿತಿ ಹೊಂದಿದ್ದರು. ಹತ್ತಾರು ವಿಷಯಗಳ ಕುರಿತು ಬರೆಯುತ್ತಿದ್ದರು. ಆಳುವ ಸರ್ಕಾರದ ವಿರುದ್ಧ ಮತ್ತು ಶೋಷಿತರ ಪರವಾಗಿ ಅವರ ವರದಿಗಳಿರುತ್ತಿದ್ದವು. 

ಇಬ್ಬರು ಮಕ್ಕಳು ಮತ್ತು ಪತ್ನಿ ಸೇರಿದಂತೆ ಕರ್ನಾಟಕದ ನೂರಾರು ಹೋರಾಟಗಾರರು, ಪತ್ರಕರ್ತ ಸಹೋದ್ಯೋಗಿಗಳನ್ನು ಅವರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News