×
Ad

ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಚಲಾಯಿಸುವ ಜನರನ್ನು ಭಯೋತ್ಪಾದಕರೆಂಬಂತೆ ಬಿಂಬಿಸುವುದು ಖಂಡನೀಯ: ಸಿದ್ದರಾಮಯ್ಯ

Update: 2021-12-26 18:45 IST

ಬೆಂಗಳೂರು, ಡಿ.26: ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಚಲಾಯಿಸುವ ಜನರ ಕುರಿತಂತೆ ಪಟ್ಟಭದ್ರ ಹಿತಾಸಕ್ತಿಗಳು ಭಯೋತ್ಪಾದಕರೆಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂಗತಿಗಳನ್ನು ಖಂಡಿಸದಿದ್ದರೆ ಬುದ್ಧ, ಬಸವ, ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳನ್ನು ಜಾರಿಗೆ ತರುವುದು ಕಷ್ಟವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಬಹುರೂಪಿ ಹಾಗೂ ಲಂಡನ್‍ನ ಬಸವ ಅಂತರ್‍ರಾಷ್ಟ್ರೀಯ ಪ್ರತಿಷ್ಠಾನ ಆಯೋಜಿಸಿದ್ದ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮಕಥನ ಬಿಡುಗಡೆ ಹಾಗೂ ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅವರು ಅಭಿವ್ಯಕ್ತಿ ಸ್ವಾತಂತ್ರದ ಮೂಲಕ ನೇರವಾಗಿ ವೈಚಾರಿಕ ವಿಚಾರಗಳನ್ನು ತಿಳಿಸಲು ಮುಂದಾದರು. ಆದರೆ, ಇದನ್ನು ಸಹಿಸದ ಕೆಲ ಸಮಾಜ ವಿರೋಧಿಗಳು ಅವರನ್ನು ಹತ್ಯೆಗೈದರು. ಇಂತಹ ದ್ರೋಹಿಗಳ ವಿರುದ್ಧ ಧ್ವನಿ ಎತ್ತಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಮತ್ತಷ್ಟು ಶಕ್ತಿ ತುಂಬಬೇಕೆಂದು ಹೇಳಿದರು. 

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.18ರಷ್ಟು ಜನರು ಶಿಕ್ಷಣ ಪಡೆದಿದ್ದರು. ಈಗ ಶೇ.75ರಷ್ಟು ಜನರು ಶಿಕ್ಷಣವಂತರಾಗಿದ್ದಾರೆ. ಆದರೂ ಅನಿಷ್ಟ ಪದ್ಧತಿ, ಮೌಢ್ಯತೆ, ಜಾತಿ ವ್ಯವಸ್ಥೆ ಹಾಗೇ ಸಮಾಜದಲ್ಲಿ ಉಳಿದುಕೊಂಡಿದೆ. ಪ್ರತಿ ದಿನ ಹೆಚ್ಚಾಗುತ್ತಲೇ ಇದೆ ಎಂದು ತಿಳಿಸಿದರು. 

ಬೌದ್ಧ ಧರ್ಮ, ಲಿಂಗಾಯತ ಧರ್ಮ ಇವುಗಳನ್ನು ಹಿಂದೂ ಧರ್ಮದ ಭಾಗ ಎನ್ನುತ್ತಿದ್ದಾರೆ. ಆದರೆ, ಬಸವಣ್ಣನವರು ವೈದಿಕ ಧರ್ಮವನ್ನು ಯಾವುತ್ತೂ ಒಪ್ಪಿಕೊಂಡಿರಲಿಲ್ಲ. ಜಾತಿ ನಿರ್ಮೂಲನೆಗಾಗಿ ನಿರಂತರವಾಗಿ ಹೋರಾಟ ನಡೆಸಿದವರು ಎಂದು ಹೇಳಿದರು. 

ಎಸ್.ಜಿ.ಸಿದ್ದರಾಮಯ್ಯ ಅವರು ಸಾಹಿತಿಗಳಾಗಿ ನನಗೆ ಬಹಳ ವರ್ಷಗಳಿಂದ ಪರಿಚಯ. ಅವರು ಯರೆಬೇವು ಎಂಬ ಆತ್ಮಕಥನವನ್ನು ರಚಿಸಿದ್ದಾರೆ. ಆತ್ಮಕಥನ ಎಂಬುದು ಆತ್ಮಾವಲೋಕನ ಆಗಬೇಕೆಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಲಂಡನ್ ಬಸವ ಅಂತರ್‍ರಾಷ್ಟ್ರೀಯ ಪ್ರತಿಷ್ಠಾನ ಅಧ್ಯಕ್ಷ ಎಸ್.ಮಹಾದೇವಯ್ಯ, ಪ್ರತಿಷ್ಠಾನದ ಕಾರ್ಯದರ್ಶಿ ಕೆ.ವಿ.ನಾಗರಾಜಮೂರ್ತಿ, ಬಹುರೂಪಿ ಜಿ.ಎನ್.ಮೋಹನ್ ಉಪಸ್ಥಿತರಿದ್ದರು. 

ಹತ್ತಿಕ್ಕುವ ಕೆಲಸ

ರಂಗಾಯಣವನ್ನು ಹತ್ತಿಕ್ಕುವ ಕೆಲಸವಾಗುತ್ತಿದ್ದು, ಇಂತಹ ವಿಚಾರಗಳನ್ನು ವಿರೋಧಿಸಬೇಕಾಗಿದೆ. ನಾನು ಹಣಕಾಸು ಸಚಿವನಾಗಿದ್ದಾಗ ರಂಗಾಯಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಸರಕಾರದಿಂದಲೇ ಸಂಬಳ ಸಿಗುವಂತಹ ಅನುಕೂಲ ಮಾಡಿಕೊಟ್ಟಿದ್ದೆ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಹಂಸಲೇಖ ಏನು ಅಂಥ ಅಪರಾಧ ಮಾಡಿದ್ದು?

‘ಹಂಸಲೇಖ ಅವರು ಏನು ಅಂತಹ ಅಪರಾಧ ಮಾಡಿದ್ದು, ಒಂದು ಹೇಳಿಕೆ ನೀಡಿದರು. ಅದಕ್ಕೆ ಎಲ್ಲರೂ ಟೀಕಿಸಿದರು. ಅವರ ಮಾತು ಅಪರಾಧವಾಗಿದ್ದರೆ ಅದು ಯಾವ ಪೆನಲ್ ಕೋಡ್‍ನಲ್ಲಿ ಬರುತ್ತೆ ಎಂದು ನನಗಂತೂ ಗೊತ್ತಿಲ್ಲ.’

ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಸಂವಿಧಾನ ವಿರೋಧಿ 

‘ಸಂವಿಧಾನದ ಆರ್ಟಿಕಲ್ 21, 25 ಪ್ರಕಾರ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆದರೂ ಈ ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ. ಇದು ಸಂವಿಧಾನ ವಿರೋಧಿಯಾಗಿದೆ.’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News