ಕಳಪೆ ಗುಣಮಟ್ಟದ ಟಾರ್ಪಾಲಿನ್ ನೀಡುವ ಸಂಸ್ಥೆಗಳು ಕಪ್ಪು ಪಟ್ಟಿಗೆ: ಕೃಷಿ ಸಚಿವ ಬಿ.ಸಿ.ಪಾಟೀಲ್
ಬೆಂಗಳೂರು, ಡಿ. 26: ಕೃಷಿ ಇಲಾಖೆಯಲ್ಲಿ ಗುಣಮಟ್ಟದ ಟಾರ್ಪಾಲಿನ್ ವಿತರಣೆಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ ಗುಣಮಟ್ಟಕ್ಕಿಂತ ಕಳಪೆ ಎಂದು ಕಂಡು ಬಂದಲ್ಲಿ ಅಂತಹ ಸಂಸ್ಥೆಗಳನ್ನು ಮುಂದಿನ 3 ವರ್ಷಗಳ ಕಾಲ ಇಲಾಖೆಯಲ್ಲಿ ಭಾಗವಹಿಸುವಿಕೆಯಿಂದ ಅನರ್ಹಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.
ರವಿವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರವಾನಿಗೆಯನ್ನು ಹೊಂದಿರುವ ಟಾರ್ಪಾಲಿನ್‍ಗಳನ್ನೇ ಸ್ವೀಕರಿಸಲು ಹಾಗೂ ವಿತರಿಸಲಾಗುತ್ತದೆ. ಕೃಷಿ ಇಲಾಖೆಯಿಂದ ಒದಗಿಸಲಾಗಿದೆ ಎಂಬುದರ ಖಾತ್ರಿಯ ಜೊತೆಗೆ ತಯಾರಿಕ ಸಂಸ್ಥೆಯ ಹೆಸರು, ಬ್ಯಾಚ್ ಸಂಖ್ಯೆ ಮತ್ತು ಭಾರತೀಯ ಮಾಪನ ಸಂಸ್ಥೆಯ ಪರವಾನಿಗೆಯ ಸಿಎಂಎಲ್ ಸಂಖ್ಯೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಟಾರ್ಪಾಲಿನ್ ಮೇಲೆ ಲೇಜರ್ ಪ್ರಿಂಟ್ ಅಥವಾ ಅಳಿಸಲಾರದ ಶಾಹಿಯಲ್ಲಿ ಮುದ್ರಿಸಿರುವುದನ್ನು ಖಾತರಿ ಪಡಿಸಿಕೊಂಡ ನಂತರವೇ ದಾಸ್ತಾನನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸ್ವೀಕರಿಸಲಾಗುತ್ತಿದೆ.
ಸರಬರಾಜು ಆದೇಶ ಪಡೆದ ಸಂಸ್ಥೆಗಳು, ಸರಬರಾಜು ಮಾಡಿದ ಟಾರ್ಪಾಲಿನ್‍ಗಳಲ್ಲಿ ಜಿಲ್ಲೆಗೆ ಒಂದರಂತೆ ಮಾದರಿಯನ್ನು ತೆಗೆದು ಗುಣಮಟ್ಟದ ಪರೀಕ್ಷೆಗಾಗಿ CIPET ಸಂಸ್ಥೆಗೆ ಗುಣಮಟ್ಟ ಪರೀಕ್ಷೆಗಾಗಿ ಪರೀಕ್ಷಾ ಶುಲ್ಕವನ್ನು ಸರಬರಾಜುದಾರ ಸಂಸ್ಥೆಯೇ ಪಾವತಿಸುವ ಷರತ್ತಿನೊಂದಿಗೆ ಕಳುಹಿಸಲು ಸೂಚಿಸಲಾಗಿರುತ್ತದೆ. ಕಟಾವಿನ ನಂತರ ಕೃಷಿ ಉತ್ಪನ್ನಗಳನ್ನು ಮಳೆ, ಗಾಳಿ ಹಾಗೂ ಇನ್ನಿತರ ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸಿ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು 6 ಮೀಟರ್ ಅಳತೆಯ ಟಾರ್ಪಾಲಿನ್‍ಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50 ಮತ್ತು ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ.90ರಷ್ಟು ಸಹಾಯ ಧನ ಒದಗಿಸಿ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ವಿತರಿಸಲಾಗುತ್ತಿದೆ. ಐದು ಪದರುಗಳುಳ್ಳ, 250 ಜಿ.ಎಸ್.ಎಂ. ತೂಕದ, ಕಪ್ಪು ಬಣ್ಣದ ಮಾನದಂಡಗಳಿಗೆ ಅನುಗುಣವಾಗಿರುವ 8 ಮೀ X 6 ಮೀ ಅಳತೆಯ HDPE ಟಾರ್ಪಾಲಿನ್‍ಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ. 2021-22ನೆ ಸಾಲಿನಲ್ಲಿ 2,39,606 ಟಾರ್ಪಾಲಿನ್‍ಗಳನ್ನು ವಿತರಿಸಲು ಜಿಲ್ಲಾವಾರು ಕ್ರಿಯಾ ಯೋಜನೆ ರೂಪಿಸಿ ನೀಡಲಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಮಾಪನ ಸಂಸ್ಥೆಯಿಂದ ಪರವಾನಿಗೆ ಹೊಂದಿರುವ ಸಂಸ್ಥೆಗಳು ಅಥವಾ ಅವರಿಂದ ಒಡಂಬಡಿಕೆ ಪಡೆದ ಸಂಸ್ಥೆಗಳನ್ನು RFP ಮುಖಾಂತರ ಅರ್ಜಿ ಕರೆದು, ಸಂಸ್ಥೆಗಳು ಹೊಂದಿರುವ ಪರವಾನಿಗೆಯನ್ನು ತಾಂತ್ರಿಕವಾಗಿ ಮೌಲ್ಯಮಾಪನಗೊಳಿಸಿ ಅರ್ಹಗೊಂಡ ಸಂಸ್ಥೆಗಳನ್ನು ಎಂಪಾನೆಲ್ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಪರವಾನಿಗೆಯನ್ನು ಹೊಂದಿರುವ 24 ಸಂಸ್ಥೆಗಳನ್ನು ಎಂಪಾನೆಲ್‍ಗೊಳಿಸಲಾಗಿರುತ್ತದೆ. ಜಿಲ್ಲೆಗಳಿಗೆ ನೀಡಿದ ಕ್ರಿಯಾ ಯೋಜನೆ ಪ್ರಕಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಎಂಪಾನೆಲ್ ಮಾಡಿದ ಯಾವುದಾದರೂ ಸಂಸ್ಥೆಗಳಿಗೆ ಟಾರ್ಪಾಲಿನ್ ಸರಬರಾಜು ಆದೇಶ ನೀಡುವ ಮುನ್ನ ಮತ್ತೊಮ್ಮೆ ಪರವಾನಿಗೆಯನ್ನು ಹೊಂದಿರುವ ಬಗ್ಗೆ ಮತ್ತು ಪರವಾನಿಗೆಯ ಸಿಂಧುತ್ವ ಪರಿಶೀಲನೆ ಮಾಡಲು ಸೂಚಿಸಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.