×
Ad

ಶಿವಮೊಗ್ಗ: ನಿರಂತರ ಜ್ಯೋತಿ ಯೋಜನೆಯ ಕಾಮಗಾರಿಯಲ್ಲಿ 12.21 ಕೋಟಿ ರೂ. ಗೋಲ್‌ಮಾಲ್; ಸಚಿವ ಈಶ್ವರಪ್ಪ ಆರೋಪ

Update: 2021-12-26 21:22 IST

ಶಿವಮೊಗ್ಗ,ಡಿ.26: ನಿರಂತರ ಜ್ಯೋತಿ ಯೋಜನೆ ಅಡಿ ಫೀಡರ್‌ಗಳ ಅಳವಡಿಕೆ ಕಾಮಗಾರಿಯಲ್ಲಿ 12.21 ಕೋಟಿ ರೂ. ಗೋಲ್‌ಮಾಲ್ ಆಗಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿಯೋಜನೆಯ ಫೀಡರ್ ಬೇರ್ಪಡಿಸುವಿಕೆ ಕಾಮಗಾರಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. 

68 ಫೀಡರ್‌ಗಳಲ್ಲಿ ಈಗಾಗಲೇ 66 ಅನ್ನು ಅಳವಡಿಸಿದ್ದು ಶಿವಮೊಗ್ಗ, ಸಾಗರ, ಶಿಕಾರಿಪುರ ಮತ್ತು ಭದ್ರಾವತಿ ವಿಭಾಗದಿಂದ ಫೀಡರ್‌ಗಳ ಅಳವಡಿಕೆಯಲ್ಲಿ ಕೋಟ್ಯಂತರ ಹಣ ವ್ಯತ್ಯಾಸವಾಗಿದೆ. ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಒಂದು ವರ್ಷದ ಹಿಂದೆಯೇ ಈ ಕುರಿತು ಸಭೆ ನಡೆಸಲಾಗಿತ್ತು. ಆದರೂ ಹಿರಿಯ ಎಂಜಿನಿಯರ್‌ಗಳು ಯಾವುದೇ ಸುಧಾರಣೆ ಮಾಡಿಕೊಂಡಿಲ್ಲ. ವ್ಯವಸ್ಥೆಯನ್ನೂ ಸರಿಪಡಿಸಿಲ್ಲ. ಅಧಿಕಾರಿಗಳು ಗುತ್ತಿಗೆದಾರರಿಂದ ಹಣ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಗರಂ ಆದರು.

ಸೆಕ್ಷನ್ ಅಧಿಕಾರಿಗಳ ಅಮಾನತಿಗೆ ಸೂಚನೆ: ಫೀಡರ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳದೇ ಗುತ್ತಿಗೆದರರಿಗೆ ಪ್ರಮಾಣಪತ್ರ ವಿತರಿಸಿರುವ ಸೆಕ್ಷನ್ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸೂಚನೆ ನೀಡಿದರು.

ಜ.1ರೊಳಗೆ ಲೋಪ ಸರಿಪಡಿಸಿಕೊಳ್ಳಿ

ಜನವರಿ 1ರಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಶಿವಮೊಗ್ಗಕ್ಕೆ ಬರುವ ಸಾಧ್ಯತೆ ಇದೆ. ಅಷ್ಟರೊಳಗೆ ಅಧಿಕಾರಿಗಳು ಸಭೆ ನಡೆಸಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದರು.

ಒಂದುವೇಳೆ, ಸಚಿವರು ಬಾರದಿದ್ದಲ್ಲಿ ಜಿಲ್ಲಾಧಿಕಾರಿಗಳ ಜತೆ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.
ಶಾಸಕ ಕುಮಾರ್ ಬಂಗಾರಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ ಸೇರಿದಂತೆ ಮೆಸ್ಕಾಂ ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News