×
Ad

ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ: ಸಚಿವ ಸೋಮಶೇಖರ್

Update: 2021-12-26 21:55 IST

ಬೆಂಗಳೂರು, ಡಿ. 26: ನಾನು ಬಿಜೆಪಿ ಪಕ್ಷದಲ್ಲಿದ್ದು ಮುಂದೆಯೂ ಇದೇ ಪಕ್ಷದಲ್ಲಿ ಇರುತ್ತೇನೆ. ಈ ಪಕ್ಷ ನನ್ನನ್ನು ಶಾಸಕ, ಮಂತ್ರಿಯನ್ನಾಗಿಯೂ ಮಾಡಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣವೇ ಬೇರೆ ವಿಶ್ವಾಸ ಬೇರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನನಗೆ ಆತ್ಮೀಯ ಸ್ನೇಹಿತರು. ನಮ್ಮ ವೈಯಕ್ತಿಕ ವಿಶ್ವಾಸ ಚೆನ್ನಾಗಿದೆ. ಆದರೆ ರಾಜಕೀಯ ವಿಶ್ವಾಸ ನಮಗಿಲ್ಲ. ನನ್ನ ರಾಜಕೀಯ ಬೆಳವಣಿಗೆಗೆ ಅವರು ಸಹಾಯ ಮಾಡಿದ್ದಾರೆ. ನಾವು ಭೇಟಿಯಾದಾಗ ರಾಜಕೀಯ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರನ್ನು ನಾನು ಭೇಟಿಯಾದ ಸಮಯದಲ್ಲಿ ಅವರು ನನ್ನನ್ನು ಕಾಂಗ್ರೆಸ್ ಪಕ್ಷ ಸೇರಲು ಆಹ್ವಾನಿಸಿಲ್ಲ. ನಾನು ಕೂಡ ಕಾಂಗ್ರೆಸ್‍ಗೆ ಬರುತ್ತೇನೆ ಎಂದು ಕೇಳಿಲ್ಲ. ಮುಂದೆಯೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಬಿಜೆಪಿ ಪಕ್ಷದಲ್ಲಿ ಮುಂದುವರಿಯಲಿದ್ದೇನೆ ಎಂದು ಸೋಮಶೇಖರ್ ತಿಳಿಸಿದರು.

ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೆ ಎದುರಿಸಲಾಗುವುದು. ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆ ಎಂಬುದು ಕೇವಲ ವದಂತಿ. ಈಗಾಗಲೇ ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟಣೆ ನೀಡಿದ್ದಾರೆ ಎಂದು ಸೋಮಶೇಖರ್ ವಿವರಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News