ಮತಾಂತರ ನಿಷೇಧ ಕಾಯ್ದೆ : ಸುಗ್ರೀವಾಜ್ಞೆಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ವಿವಾದಿತ ಮತಾಂತರ ನಿಷೇಧ ಕಾಯ್ದೆಗೆ ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್ತಿನಲ್ಲಿ ಅನುಮೋದನೆ ಪಡೆಯಲು ವಿಫಲವಾದ ರಾಜ್ಯ ಸರ್ಕಾರ, ಇದೀಗ ಕಾನೂನು ಜಾರಿಗಾಗಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.
"ಸುಗ್ರೀವಾಜ್ಞೆಯ ಕರಡನ್ನು ಮುಂದಿನ ವಾರ ಸಂಪುಟ ಸಭೆಯ ಮುಂದಿಡಲಾಗುವುದು. ರಾಜ್ಯಪಾಲರ ಅನುಮೋದನೆ ಪಡೆದು ಜನವರಿ ಆರಂಭದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಉದ್ದೇಶಿಸಲಾಗಿದೆ" ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಬಹಿರಂಗಪಡಿಸಿದ್ದಾರೆ.
ಆದಾಗ್ಯೂ, ಸುಗ್ರೀವಾಜ್ಞೆ ಹೊರಡಿಸುವ ಮುನ್ನ ಜಂಟಿ ಅಧಿವೇಶನ ನಡೆಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ಜನವರಿ ಅಥವಾ ಫೆಬ್ರುವರಿಯಲ್ಲಿ ವಿಧಾನಮಂಡಲದ ಮುಂದಿನ ಅಧಿವೇಶನದ ವೇಳೆ ಪರಿಷತ್ತಿನಲ್ಲಿ ಮಸೂದೆಗೆ ಅನುಮೋದನೆ ಪಡೆಯಲು ಅವಕಾಶವಿದೆ. ಆದರೆ ಅಧಿವೇಶನ ವಿಳಂಬವಾದರೆ ಸುಗ್ರೀವಾಜ್ಞೆ ಹೊರಡಿಸುವ ಮಾರ್ಗ ಅನುಸರಿಸಲಾಗುವುದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಸೂದೆಯನ್ನು ಡಿ. 23ರಂದು ವಿಧಾನಸಭೆಯಲ್ಲಿ ಧ್ವನಿಮತದಿಂದ ಆಂಗೀಕರಿಸಲಾಗಿತ್ತು. ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಅನುಮೋದನೆ ಪಡೆಯುವ ಪ್ರಯತ್ನವನ್ನು ಸರ್ಕಾರ ಮಾಡಿದರೂ, ಅಗತ್ಯ ಬಲ ಇಲ್ಲದ ಕಾರಣ ಮುಂದೂಡುವುದು ಅನಿವಾರ್ಯವಾಯಿತು. ಮುಂದಿನ ಅಧಿವೇಶನದಲ್ಲಿ ಮಸೂದೆಯನ್ನು ಕೈಗೆತ್ತಿಕೊಳ್ಳುವ ಯೋಚನೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಅನುಮೋದನೆಗಾಗಿ ಸದನವನ್ನು ಕೋರುವುದಿಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು.