ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಆರಂಭ
Update: 2021-12-27 09:29 IST
ಬೆಂಗಳೂರು, ಡಿ.27: ರಾಜ್ಯದಲ್ಲಿ ಐದು ನಗರಸಭೆಗಳು ಸೇರಿದಂತೆ ಅವಧಿ ಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 57 ಗ್ರಾಮ ಪಂಚಾಯತ್ ಗಳ ಸದಸ್ಯರ ಆಯ್ಕೆಗೆ ಮತದಾನ ಆರಂಭಗೊಂಡಿದೆ.
ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಎಂಟು ಸ್ಥಾನಗಳು ಮತ್ತು ಹಲವು ಗ್ರಾಮ ಪಂಚಾಯತ್ ಗಳ 386 ಸದಸ್ಯ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.
ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ–ಬೆಟಗೇರಿ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರಸಭೆಗಳು, ಉಡುಪಿ ಜಿಲ್ಲೆಯ ಕಾಪು ಪುರಸಭೆ ಸಹಿತ ವಿವಿಧ ಜಿಲ್ಲೆಗಳ 19 ಪುರಸಭೆಗಳು ಮತ್ತು ದ.ಕ. ಜಿಲ್ಲೆಯ ವಿಟ್ಲ, ಕೋಟೆಕಾರ್ ಪಟ್ಟಣ ಪಂಚಾಯತ್ ಸಹಿತ 34 ಪಟ್ಟಣ ಪಂಚಾಯತ್ ಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಸಂಜೆ 5ರವರೆಗೂ ಮತದಾನ ನಡೆಯಲಿದ್ದು, ಅಗತ್ಯವಿದ್ದಲ್ಲಿ ಬುಧವಾರ (ಡಿ.29) ಮರು ಮತದಾನ ನಡೆಯಲಿದೆ. ಗುರುವಾರ (ಡಿ.30) ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದೆ.