×
Ad

ಚಿಕ್ಕಮಗಳೂರು ನಗರಸಭೆ ಚುನಾವಣೆ: ಮತದಾನ ಬಿರುಸು

Update: 2021-12-27 10:40 IST

ಚಿಕ್ಕಮಗಳೂರು, ಡಿ.27: ಇಲ್ಲಿನ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಬೆಳಗ್ಗೆ 10ರವರೆಗೆ ಮಂದಗತಿಯಲ್ಲಿ ಮತದಾನವಾಗಿದ್ದರೆ, ಆ ಬಳಿಕ ಮತದಾನ ಪ್ರಕ್ರಿಯೆ ಬಿರುಸು ಪಡೆದುಕೊಂಡಿದೆ. ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳ 35 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ನಗರದಲ್ಲಿ ಒಟ್ಟು 110 ಮತಗಟ್ಟೆಗಳಲ್ಲಿ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ.

ನಗರಸಭೆಯ 35 ಸ್ಥಾನಗಳಿಗೆ 146 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಪ್, ಸಿಪಿಐ, ಬಿಎಸ್ಪಿ, ಎಸ್ಡಿಪಿಐ ಪಕ್ಷಗಳ ಅಭ್ಯರ್ಥಿಗಳೊಂದಿಗೆ 56 ಪಕ್ಷೇತರರು ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಪ್ರತೀ ಮತಗಟ್ಟೆಗಳ ಎದುರು ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತಗಟ್ಟೆಗೆ ಬರುವ ಮತದಾರರ ಸೆಳೆಯಲು ಕಸರತ್ತು ನಡೆಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹಾಗೂ ಪತ್ನಿ ಪಲ್ಲವಿ ಸೋಮವಾರ ನಗರದ ವಾರ್ಡ್ ಸಂಖ್ಯೆ 28ರ ಮತಗಟ್ಟೆ ಸಂಖ್ಯೆ 99ರಲ್ಲಿ ಮತದಾನ ಮಾಡಿದರು. 

ಶಾಂತಿಯುತ ಮತದಾನದ ಹಿನ್ನೆಲೆಯಲ್ಲಿ ಪ್ರತೀ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ 1,00,610 ಮತದಾರರಿದ್ದು, ಈ ಮತದಾರರು 146 ಮತದಾರರ ಭವಿಷ್ಯವನ್ನು ಇವಿಎಂ ಯಂತ್ರಗಳಲ್ಲಿ ಭದ್ರಪಡಿಸಲಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News