ಸೋಮವಾರಪೇಟೆ: 15 ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ

Update: 2021-12-27 12:16 GMT

ಸೋಮವಾರಪೇಟೆ: ರೈತರು ಹಾಗು ಕಾಫಿ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜೇಸಿ ವೇದಿಕೆಯಲ್ಲಿ ನಡೆಯುತ್ತಿರುವ ರೈತರ ಧರಣಿ 15 ನೇ ದಿನವನ್ನು ಪೂರೈಸಿದೆ.

ರೈತರ ಧರಣಿಗೆ ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟರು ಕೆಲಸಗಾರರ ಸಂಘ ಹಾಗು ಆಟೋ ಚಾಲಕರು ಮತ್ತು ಮಾಲೀಕರು ಸಂಘ ಬೆಂಬಲ ವ್ಯಕ್ತಪಡಿಸಿ, ಸೋಮವಾರದ ಧರಣಿಯಲ್ಲಿ ಚಾಲಕರು ಪಾಲ್ಗೊಂಡರು. ರೈತರ ಬೇಡಿಕೆ ಸಮಂಜಸವಾಗಿದ್ದು, ಸರ್ಕಾರ ಬೇಡಿಕೆಯನ್ನು ಈಡೇರಿಸಬೇಕು ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್ ಒತ್ತಾಯಿಸಿದರು. ಕಾಫಿ ಹೂವಿನ ಸಂದರ್ಭ ಸಕಾಲದಲ್ಲಿ ಮಳೆ ಬೀಳದಿದ್ದರೆ ಫಸಲು ಸಿಗುವುದಿಲ್ಲ. ಕಾಫಿ ಬೆಳೆಗಾರರ 10ಹೆಚ್.ಪಿ.ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರೆ ಕಾಫಿ ಉತ್ಪಾದನೆ ಜಾಸ್ತಿಯಾಗುತ್ತದೆ ಎಂದರು. 

ರೈತ ಚಳುವಳಿ ನಿರಂತರವಾದರೆ ಸರ್ಕಾರ ಸೌಲಭ್ಯಗಳನ್ನು ನೀಡುತ್ತದೆ. ಇಲ್ಲದಿದ್ದರೆ ಮಲತಾಯಿಧೋರಣೆ ಮುಂದುವರಿಸುತ್ತದೆ. ಕೊಡಗಿನ ರೈತರು ಮೌನಕ್ಕೆ ಶರಣಾಗಿರುವುದರಿಂದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ ಎಂದು ರೈತಹೋರಾಟಗಾರ ಜಿ.ಎಂ.ಹೂವಯ್ಯ ಹೇಳಿದರು.

ಕಾಫಿ ಬೆಳೆಗಾರರ 10 ಎಚ್.ಪಿ.ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಕಾಫಿ, ಕಾಳುಮೆಣಸು ಏಲಕ್ಕಿ ಬೆಳೆಗಳಿಗೆ ಬೆಂಬಲ ಬೆಲೆ(ಎಂಎಸ್‌ಪಿ) ನೀಡುವ ತನಕ ಹೋರಾಟ ನಡೆಯುತ್ತಿರುತ್ತದೆ ಎಂದು ಧರಣಿನಿರತರು ಹೇಳಿದರು.

ಆಟೋ ಯೂನಿಯನ್ ಅಧ್ಯಕ್ಷ ಮೋಹನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಎ.ಪಿ.ವೀರರಾಜು, ಪ್ರಗತಿಪರ ರೈತರಾದ ಎಚ್.ಆರ್.ಸುರೇಶ್, ಡಿ.ಎಸ್.ಚಂಗಪ್ಪ,  ಕೆ.ಎಂ.ದಿನೇಶ್, ಎ.ಆರ್.ಕುಶಾಲಪ್ಪ, ಲಿಂಗೇರಿ ರಾಜೇಶ್, ಗರಗಂದೂರು ಲಕ್ಷ್ಮಣ್ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News