ಆಮಿಷ, ಬಲವಂತದ ಮತಾಂತರ ತಪ್ಪು: ಸಂಸದೆ ಸುಮಲತಾ ಅಂಬರೀಶ್

Update: 2021-12-27 14:47 GMT

ಮಂಡ್ಯ, ಡಿ.27: ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಎಲ್ಲಾ ಧರ್ಮಗಳಲ್ಲಿಯೂ ಮತಾಂತರ ನಡೆಯುತ್ತಿದೆ. ಆದರೆ, ಆಮಿಷ, ಬಲವಂತದ ಮತಾಂತರ ತಪ್ಪು. ಅವರೇ ಇಷ್ಟಪಟ್ಟು ಯಾವುದೇ ಧರ್ಮಕ್ಕೆ ಮತಾಂತರವಾಗುತ್ತೇನೆಂದರೆ ಯಾರೇ ಆಕ್ಷೇಪ ಮಾಡಬಾರದು ಎಂದು ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.

ಮಿಮ್ಸ್ ಆಸ್ಪತ್ರೆಗೆ ಐಸಿಯು ಅಂಬ್ಯುಲೆನ್ಸ್ ಹಸ್ತಾಂತರದ ವೇಳೆ ಮತಾಂತರ ವಿಧೇಯಕ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಧೇಯಕದಲ್ಲಿ ಯಾರೂ ಮತಾಂತರ ಆಗಬಾರದು ಎಂಬುದಿಲ್ಲ. ಆದರೆ, ಬಲವಂತದ ಮತಾಂತರ ಬೇಡ ಅಂತಿದೆ. ಹಾಗಾಗಿ ಅದು ಸರಿ ಇದೆ ಎಂದರು.

ಈಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಹೊಸಮುಖವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬದಲಾವಣೆ ಬೇಕಾಗಿತ್ತು. ಅದನ್ನು ಸ್ವಾಗತಿಸುತ್ತೇನೆ. ನೂತನ ಸದಸ್ಯರು ಒಳ್ಳೆಯ ಕೆಲಸ ಮಾಡುವರಂದ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಕೋವಿಡ್ ಬಗ್ಗೆ  ಜನರಲ್ಲಿ ಅರಿವು ಮೂಡಿಸುವುದು ತುಂಬಾ ಕಷ್ಟದ ಕೆಲಸ. ಸರಕಾರ, ಆಡಳಿತ ಏನೇ ಮುನ್ನೆಚ್ಚರಿಕೆವಹಿಸಿದ್ದರೂ ಜನರಲ್ಲಿ ಆ ಬಗ್ಗೆ ಎಚ್ಚರಿಕೆ ಬರದಿದ್ದರೆ ಏನು ಮಾಡುವುದು? ಈಗಾಗಲೇ ಒಂದು, ಎರಡನೇ ಅಲೆ ನೋಡಿದ್ದೇವೆ. ಹಾಗಾಗಿ ಜನರು ಜಾಗೃತೆ ವಹಿಸಬೇಕು ಎಂದು ಅವರು ತಿಳಿಸಿದರು.

ಮೊದಲನೇ ಅಲೆ ಬಂದಾಗ ಜಾಗೃತಿ ಕಡಿಮೆ ಇತ್ತು. ಆ ವೇಳೆ ತಾತ್ಕಾಲಿಕವಾಗಿ ಎರಡು ಅಂಬ್ಯುಲೆನ್ಸ್, ವೆಂಟಿಲೇರ‍್ಸ್ ವ್ಯವಸ್ಥೆ ಮಾಡಲಾಗಿತ್ತು. ಅದು ಎರಡನೇ ಅಲೆ ತೀವ್ರವಾದಾಗ ಅನುಕೂಲಕ್ಕೆ ಬಂತು. ಈಗ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್‌ಗಳಿವೆ. ಎಲ್ಲಾ ರೀತಿಯ ಮುನ್ನಚ್ಚರಿಕೆವಹಿಸಲಾಗಿದೆ ಎಂದು ಅವರು ಹೇಳಿದರು.

ಆಸ್ಪತ್ರೆಗೆ ಐಸಿಯು ಅಂಬ್ಯುಲೆನ್ಸ್ ಅತ್ಯಾವಶ್ಯವಿತ್ತು. ಹಾಗಾಗಿ 66 ಲಕ್ಷ ರೂ. ವೆಚ್ಚದ ಸುಸಜ್ಜಿತವಾದ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಮಾತ್ರವಲ್ಲ, ಯಾವುದೇ ರೋಗಿಯನ್ನು ಸರಿಯಾದ ಸಮಯಕ್ಕೆ ತಲುಪಿಸಬೇಕು ಎಂಬದು ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News