'ಚಿಕ್ಕಮಗಳೂರು-ಬೇಲೂರು ಚತುಷ್ಫಥ ರಸ್ತೆ ಅಭಿವೃದ್ಧಿಗೆ ಸರಕಾರಕ್ಕೆ ಶೀಘ್ರ ಪ್ರಸ್ತಾವ ಸಲ್ಲಿಸಿ'
ಚಿಕ್ಕಮಗಳೂರು, ಡಿ.27: ಬೇಲೂರು-ಚಿಕ್ಕಮಗಳೂರು ನಡುವೆ ಸದ್ಯ ಇರುವ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಬೇಕಿದ್ದು, ಈ ಸಂಬಂಧ ರಾಜ್ಯ ಸರಕಾರಕ್ಕೆ ಶೀಘ್ರ ಪ್ರಸ್ತಾವ ಸಲ್ಲಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯನ್ನು ಇನ್ನಷ್ಟು ಉತ್ತೇಜಿಸಲು ಮತ್ತು ಭವಿಷ್ಯದ ಸಂಚಾರ ಹಿತದೃಷ್ಟಿಯಿಂದ ಚಿಕ್ಕಮಗಳೂರು -ಬೇಲೂರು ರಸ್ತೆ ಮೇಲ್ದರ್ಜೆಗೇರಿಸುವುದು ಅಗತ್ಯವಾಗಿದೆ. ಆದ್ದರಿಂದ ಸರಕಾರಕ್ಕೆ ಶೀಘ್ರ ಪ್ರಸ್ತಾವ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಈಗಿರುವ ಹೆಲಿಪ್ಯಾಡನ್ನು ಹೆಲಿಪೋರ್ಟ್ ಆಗಿ ಪರಿವರ್ತಿಸಿದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚು ಬಲ ಬರಲಿದೆ. ಈ ನಿಟ್ಟಿನಲ್ಲಿ ವಿವರವಾದ ಯೋಜನಾ ವರದಿ ತಯಾರಿಸಿ ಸಲ್ಲಿಸುವಂತೆ ಉಸ್ತುವಾರಿ ಕಾರ್ಯದರ್ಶಿ ಶಿಖಾ ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಿಂದ ಮಾಸ್ಟರ್ ಪ್ಲಾನ್ ತಯಾರಿಸಿ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದ ಅವರು, ಅತಿವೃಷ್ಟಿಯಿಂದ ಮನೆ ಹಾನಿಯಾದವರಿಗೆ ಪರಿಹಾರ ವಿತರಣೆ ಸಂಬಂಧ ಎಲ್ಲಾ ಪ್ರಕ್ರಿಯೆಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಬೇಕು. ವಿಪತ್ತು ನಿರ್ವಹಣೆಗೆ ಅನುದಾನದ ಕೊರತೆಯಾಗದಂತೆ ಗಮನಹರಿಸಬೇಕು. ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು. ಕೋವಿಡ್ ಲಸಿಕಾಕರಣದಲ್ಲಿ ಎರಡನೇ ಡೋಸ್ ನೀಡಿಕೆ ಕಾರ್ಯವನ್ನು ತ್ವರಿತಗೊಳಿಸಬೇಕೆಂದರು.
ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಾಂಬಾರು ಬೆಳೆಗಳ ಪಾರ್ಕ್(ಸ್ಪೆöÊಸ್ ಪಾರ್ಕ್) ನಿರ್ಮಾಣಕ್ಕೆ ಈಗಾಗಲೇ 10 ಎಕರೆ ಜಾಗವನ್ನು ಕೆಐಎಡಿಬಿಗೆ ಹಸ್ತಾಂತರಿಸಲಾಗಿದೆ. ಈ ಕಾಮಗಾರಿ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಲು ಈಗಾಗಲೇ ಸಾಂಬಾರು ಮಂಡಳಿಗೆ ಪತ್ರ ಬರೆಯಲಾಗಿದೆ. ಮಂಡಳಿಯಿಂದ ಪೂರಕವಾದ ಸ್ಪಂದನೆ ದೊರಕಿದ್ದು, ಪ್ರವಾಸೋದ್ಯಮದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಜಿಲ್ಲೆಯ ರೆಸಾರ್ಟ್ ಮಾಲಕರೊಂದಿಗೆ ಸಭೆ ನಡೆಸಲಾಗಿದೆ. ಈ ಕ್ಷೇತ್ರದಲ್ಲಿ ವೃತ್ತಿ ನೈಪುಣ್ಯವುಳ್ಳವರನ್ನು ಸೃಷ್ಟಿಸಲು ಕೌಶಲ್ಯಾಭಿವೃದ್ಧಿ ತರಭೇತಿ ನೀಡಲು ಮುಂದೆ ಬಂದಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಜಲಜೀವನ್ ಮಿಶನ್ ಯೋಜನೆಯಡಿ 251 ಕಾಮಗಾರಿಗಳು ಪ್ರಾರಂಭವಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಪ್ರತೀ ಮನೆಗೆ ನಳ್ಳಿನೀರಿನ ಸಂಪರ್ಕ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ನರೇಗಾ ಯೋಜನೆಯಲ್ಲಿ ಅಗತ್ಯ ಕಾಮಗಾರಿಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ನಿವೇಶನ ಗುರುತಿಸಿ, ಮನೆ ನಿರ್ಮಿಸಲು ಸ್ಪಷ್ಟವಾದ ಯೋಜನೆ ರೂಪಿಸಲಾಗಿದೆ. ಜಮೀನು ಮಂಜೂರಾತಿಗೆ ಕಂದಾಯ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.