ಮಹಿಳೆಯನ್ನು ಅಕ್ರಮವಾಗಿ ಕೂಡಿಟ್ಟ ಪೊಲೀಸ್ ಇನ್‌ಸ್ಪೆಕ್ಟರ್‌ಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

Update: 2021-12-27 16:56 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನ ಮನೆ ತೊರೆದಿದ್ದ ಮಹಿಳೆ ಹಾಗೂ ಆಕೆಯ 3 ವರ್ಷದ ಮಗಳನ್ನು ಅಕ್ರಮವಾಗಿ ವೇಶ್ಯಾವಾಟಿಕೆ ಮಾನವ ಕಳ್ಳಸಾಗಣೆ ಪುನರ್ವಸತಿ ಕೇಂದ್ರದಲ್ಲಿ ಕೂಡಿಟ್ಟ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನೀಲ್ ಬಾಳಾಸಾಹೇಬ್ ಪಾಟೀಲ್‌ಗೆ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಜತೆಗೆ ನ್ಯಾಯ ಕೊಡಿಸುವ ನೆಪದಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸುವ ಅಧಿಕಾರ ಪೊಲೀಸರಿಗಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.   

ತನ್ನನ್ನು ಪುನರ್ವಸತಿ ಕೇಂದ್ರದಲ್ಲಿ ಬಲವಂತವಾಗಿ ಇರಿಸಿದ್ದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಪೊಲೀಸರ ಕ್ರಮಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಗಂಡನನ್ನು ತೊರೆದಿದ್ದ ಮಹಿಳೆಯನ್ನು ಆಕೆಯ ಪತಿಯ ದೂರಿನ ಮೇರೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪತಿಯೊಂದಿಗೆ ಮಹಿಳೆ ಹೋಗಲು ನಿರಾಕರಿಸಿದ್ದಾರೆ. ಇದಕ್ಕೆ ಒಪ್ಪದ ಪೊಲೀಸರು ಮಹಿಳೆ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಮಗಳನ್ನು ವೇಶ್ಯಾವಾಟಿಕೆಗೆ ತುತ್ತಾದ ಮಹಿಳೆಯರ ಪುನರ್ವಸತಿ ಕೇಂದ್ರದಲ್ಲಿ ಇರಿಸಿದ್ದು ನಿಜಕ್ಕೂ ಆಘಾತಕಾರಿ ವಿಚಾರ ಎಂದು ಬೇಸರ ವ್ಯಕ್ತಪಡಿಸಿದೆ.

ಮಹಿಳೆಯೇ ತನ್ನ ಪತಿ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಪತಿಯೊಂದಿಗೆ ಮಹಿಳೆ ಹೋಗಲು ನಿರಾಕರಿಸಿದರು. ಆಕೆಯ ಪೋಷಕರು ಕೂಡ ಮಹಿಳೆಯನ್ನು ಕರೆದುಕೊಂಡು ಹೋಗಲು ಬರಲಿಲ್ಲ. ಇದರಿಂದಾಗಿ ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ವಾಸ್ತವ ಸಂಗತಿಯಲ್ಲ ಎಂದು ಪೊಲೀಸರ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪೊಲೀಸರು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಮತ್ತು ಆಕೆಯ ಪುತ್ರಿಯನ್ನು ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಇಟ್ಟಿದ್ದು ಬಂಧನವಲ್ಲದೆ ಮತ್ತೇನೂ ಅಲ್ಲ. ಬರೋಬ್ಬರಿ 5 ತಿಂಗಳ ಕಾಲ ಬಲವಂತವಾಗಿ ಕೂಡಿಟ್ಟಿದ್ದು ಜೈಲು ಶಿಕ್ಷೆಗೆ ಸಮ ಎಂದು ಪೊಲೀಸರ ನಡೆಗೆ ಹೈಕೋರ್ಟ್ ಕಿಡಿಕಾರಿದೆ. ಪೊಲೀಸರ ಈ ನಿಯಮಬಾಹಿರ ಕೃತ್ಯಕ್ಕಾಗಿ 1 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದೆ. ಇದೇ ವೇಳೆ ನಿಯಮ ಬಾಹಿರವಾಗಿ ಮಹಿಳೆ ಮತ್ತಾಕೆಯ ಪುತ್ರಿಯನ್ನು ಇರಿಸಿಕೊಂಡಿದ್ದಕ್ಕೆ ಪುನರ್ವಸತಿ ಕೇಂದ್ರಕ್ಕೂ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

2017ರಲ್ಲಿ ವಿವಾಹವಾಗಿದ್ದ ದಂಪತಿ ನಡುವೆ ವಿರಸ ಮೂಡಿತ್ತು. ಈ ಹಿನ್ನೆಲೆಯಲ್ಲಿ 22 ವರ್ಷದ ಮಹಿಳೆ ಹಾಗೂ ಆಕೆಯ 3 ವರ್ಷದ ಪುತ್ರಿ ಮನೆ ತೊರೆದಿದ್ದರು. 2021ರ ಮೇ 3ರಂದು ಪತಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ್ದ ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆಸಿ ಪತಿ ಜೊತೆಗೆ ತೆರಳುವಂತೆ ಸೂಚಿಸಿದ್ದರು. ಆದರೆ ಮಹಿಳೆ ಒಪ್ಪಿರಲಿಲ್ಲ. ನಂತರ ಪೊಲೀಸರು ಮಹಿಳೆಯನ್ನು ಬಲವಂತವಾಗಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದ್ದರಿಂದ ಮಹಿಳೆ ಮತ್ತು ಆಕೆಯ ಪುತ್ರಿ ಮೇ.26ರಿಂದ ಅಕ್ಟೋಬರ್ 21ರವರೆಗೆ ಅಲ್ಲಿಯೇ ವಾಸವಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News