ಹಿರಿಯ ನಾಗರಿಕರಿಗೆ ಬಿಸಿಯೂಟ ನೀಡಿ: ಸರಕಾರಕ್ಕೆ ಮನವಿ ಮಾಡಿದ ಒಕ್ಕೂಟ

Update: 2021-12-27 17:11 GMT

ಬೆಂಗಳೂರು, ಡಿ.27: ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಕೊಡುತ್ತಿದ್ದ ಬಿಸಿಯೂಟವನ್ನು ಕೊರೋನ ಕಾರಣ 2020 ಮಾರ್ಚ್ 26ರಂದು ನಿಲ್ಲಿಸಲಾಯಿತು. ಮತ್ತೆ ಈ ಯೋಜನೆಯನ್ನು ಹಿರಿಯ ನಾಗರಿಕರಿಗೂ ಜಾರಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ ಸಂಘದ ಅಧ್ಯಕ್ಷ ಲತಾ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ದುಡಿದು ಸಮಾಜಕ್ಕೆ ಬೆವರು ಹರಿಸಿ ನಿವೃತ್ತರಾದ ಸಹಸ್ರಾರು ಮಂದಿ ಇಂದು ಒಪ್ಪತ್ತಿನ ಊಟವಿಲ್ಲದೆ ಪರದಾಡುತ್ತಿದ್ದಾರೆ. ಈ ಹಿಂದೆ ಬಿಸಿಯೂಟ ಯೋಜನೆ ನಮ್ಮಂತವರಿಗೆ ಅನುಕೂಲವಾಗುತ್ತಿತ್ತು ಎಂದರು. 

ಆದರೆ, ಕೊರೋನ ಕಾರಣ ಯೋಜನೆಯನ್ನು 2020ರಲ್ಲಿ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ, ದುಡಿಯಲು ಅಶಕ್ತವಾದ ನಮ್ಮಂತಹ ಹಿರಿಯ ಬಡ ಜೀವಿಗಳಿಗೆ ಒಪ್ಪತ್ತಿನ ಊಟವಿಲ್ಲದೆ ಹಸಿವಿನಿಂದ ಜೀವನ ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ. ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಬಿಬಿಎಂಪಿ ಮುಖ್ಯ ಕಚೇರಿಗೆ ಹೋಗಿ ಯೋಜನೆಯ ಪುನರ್ ಆರಂಭಿಸುವ ಬಗ್ಗೆ ಬೇಡಿಕೆಯಿಟ್ಟರು ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದರು. 

ಇಂದಿರಾ ಕ್ಯಾಂಟೀನ್ ಬಳಿ ಹೋಗಿ ಊಟ ಮಾಡುವಷ್ಟು ಶಕ್ತಿ ನಮ್ಮಲಿಲ್ಲ. ದಯಮಾಡಿ ನಮಗೆ ಮತ್ತೆ ಬಿಸಿಯೂಟದ ಕಾರ್ಯಕ್ರಮ ಪುನರಾರಂಭಿಸಿ ವೃದ್ಧ ಸಮುದಾಯಕ್ಕೆ ನೆರವಾಗಬೇಕು ಎಂದು ಲತಾ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗಂಗಮ್ಮ, ಕೆಂಚಪ್ಪ, ಶ್ರೀದೇವಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News