ರಾಜ್ಯದ ವಿವಿ ಘಟಿಕೋತ್ಸವಗಳಲ್ಲಿ ಖಾದಿ ಉಡುಪುಗಳನ್ನು ಬಳಸಲು ರಾಜ್ಯಪಾಲ ಕರೆ

Update: 2021-12-27 17:38 GMT

ಬೆಂಗಳೂರು: ಖಾದಿ ಸಂಸ್ಕೃತಿ ಬಿಂಬಿಸುವುದರ ಜೊತೆಗೆ ನೇಕಾರರು ತಯಾರಿಸುವ ಖಾದಿ ಉತ್ಪನ್ನಗಳಿಗೆ ಉತ್ತೇಜಿಸುವ ಉದ್ದೇಶದಿಂದ ವಿಶ್ವ ವಿದ್ಯಾಲಯಗಳ ಘಟಿಕೋತ್ಸವ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಖಾದಿ ಧಿರಿಸು ಅಥವಾ ದೇಸಿ ಉಡುಪು ಬಳಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದರು.

ಸೋಮವಾರ ನಗರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆದ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ-2021ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಾಮಾಜಿಕ ಮೌಲ್ಯಗಳನ್ನು ಮನದಟ್ಟು ಮಾಡಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ವದ್ದಾಗಿರುತ್ತದೆ. ಎಲ್ಲ್ಲ ವಿಶ್ವವಿದ್ಯಾಲಯಗಳು ಸಾಮಾಜಿಕ ವಿಷಯಗಳನ್ನು ಅಧ್ಯಯನ ಮಾಡಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ದೇಸಿ ಉಡುಪು ಬಳಕೆ ಮಾಡುವ ಮೂಲಕ ದೇಶದ ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು ಎಂದು ಅವರು ಹೇಳಿದರು.

ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ವಿಶ್ವವಿದ್ಯಾಲಯಗಳಲ್ಲಿ ದಿವ್ಯಾಂಗರಿಗೆ, ಅಶಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ಕಾನೂನು ವಿಶ್ವವಿದ್ಯಾಲಯವು ಬಡವರಿಗೆ ಉಚಿತವಾಗಿ ಕಾನೂನಿನ ಸಲಹೆ ನೀಡಲು ಮುಂದಾಗಬೇಕು. ಒಟ್ಟಾರೆ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವ ಜವಾಬ್ದಾರಿ ಕುಲಪತಿಗಳದಾಗಿರುತ್ತದೆ ಎಂದು ಅವರು ತಿಳಿಸಿದರು.

ಇಡೀ ದೇಶದಲ್ಲಿ ಉನ್ನತ ಶಿಕ್ಷಣ ಒದಗಿಸುವಲ್ಲಿ ಕರ್ನಾಟಕ ರಾಜ್ಯ ಅಗ್ರ ಸ್ಥಾನದಲ್ಲಿದೆ. ಇದಕ್ಕೆ ವಿಶ್ವವಿದ್ಯಾಲಯಗಳ ಕೊಡುಗೆ ಅಪಾರ. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದಲ್ಲೂ ಇಡೀ ದೇಶದಲ್ಲಿ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದಕ್ಕಾಗಿ ರಾಜ್ಯ ಸರಕಾರಕ್ಕೆ ಮತ್ತು ವಿಶ್ವವಿದ್ಯಾಲಯಗಳಿಗೆ ಅಭಿನಂದಿಸುತ್ತೇನೆ ಎಂದು ರಾಜ್ಯಪಾಲ ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡುವುದು, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಶಿಕ್ಷಣ ಅರಿವು ಮೂಡಿಸುವುದು, ಶಿಕ್ಷಣ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಕಾರ್ಯರೂಪಗೊಳಿಸುವುದು, ಕರ್ತವ್ಯದ ಜೊತೆಗೆ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಯುಜಿಸಿಯ ಮಾರ್ಗಸೂಚಿಗಳ ಆಧಾರದ ಮೇಲೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಎಲ್ಲ್ಲ ವಿಶ್ವವಿದ್ಯಾಲಯಗಳಲ್ಲಿ ಜಾರಿಗೊಳಿಸುವಂತೆ ರಾಜ್ಯಪಾಲ ಸಭೆಗೆ ಸೂಚಿಸಿದರು.

ವಿಶ್ವವಿದ್ಯಾಲಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಆದರೆ, ಇದಕ್ಕೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಜೊತೆ ವಿಶ್ವವಿದ್ಯಾಲಯಗಳು ಕೈಜೋಡಿಸಬೇಕು. ವಿಶ್ವವಿದ್ಯಾಲಯದ ಆಡಳಿತಾತ್ಮಕ ಅನುಭವಗಳೊಂದಿಗೆ ಕುಲಪತಿಗಳು ಸರಕಾರಕ್ಕೆ ಸಲಹೆಗಳನ್ನು ನೀಡಬಹುದು. ಉನ್ನತ ಶಿಕ್ಷಣವನ್ನು ಸಮಾಜಕ್ಕೆ ಸಮಾನವಾಗಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕಾರ್ಯಪ್ರವೃತ್ತರಾಗಿರಬೇಕು ಎಂದು ಅವರು ತಿಳಿಸಿದರು.

ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸಾಧ್ಯವಿರುವಂತಹ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ಸರಕಾರದ ಮಟ್ಟದಲ್ಲಾದರೆ, ಸರಕಾರಕ್ಕೆ ಪತ್ರ ಬರೆದು, ರಾಜ್ಯಪಾಲರಿಗೆ ಪ್ರತಿಯನ್ನು ಸಲ್ಲಿಸಿ. ಕಾನೂನಿನಾತ್ಮಕವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಯಾವುದೇ ಸಮಸ್ಯೆಗಳಿದ್ದರೇ, ಸರಕಾರ ಮತ್ತು ರಾಜ್ಯಪಾಲರ ಗಮನಕ್ಕೆ ತರುವ ಮೂಲಕ ತ್ವರಿತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಸಭೆಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ವಿಶ್ವವಿದ್ಯಾನಿಲಯಗಳು ಮತ್ತು ಅವರ ಸಾಧನೆಗಳ ಕುರಿತು, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಸಮಯದಲ್ಲಿ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಸವಾಲುಗಳನ್ನು ಜಯಿಸಲು ವಿಶ್ವವಿದ್ಯಾಲಯಗಳ ಪ್ರಯತ್ನ ಮತ್ತು ಎನ್‌ಇಪಿ-2020ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರಕಾರಕ್ಕೆ ಸಲಹೆಗಳ ಕುರಿತು ಪ್ರಸ್ತುತ ಪಡಿಸಿದರು. ಅಲ್ಲದೇ, ಸಭೆಯಲ್ಲಿ ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ರಾಜ್ಯಪಾಲರ ಭಾಷಣ ಸೇರ್ಪಡೆಗೊಳಿಸಲು ಮತ್ತು ಖಾದಿ ಧಿರಿಸು ಬಳಸಲು ತೀರ್ಮಾನಿಸಲಾಯಿತು ಎಂದು ಹೇಳಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News