ಬೊಮ್ಮಾಯಿ ಮುಖ್ಯಮಂತ್ರಿ ಆಗಿರುವವರೆಗೂ ನಮ್ಮ ಬೆಂಬಲ ಇರುತ್ತದೆ: ಜಯಮೃತ್ಯುಂಜಯ ಸ್ವಾಮೀಜಿ

Update: 2021-12-28 12:10 GMT

ಬೆಂಗಳೂರು, ಡಿ.28: ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ನಮ್ಮ ಬೆಂಬಲವಿರುತ್ತದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಬೊಮ್ಮಾಯಿ ಅವರು ಯಡಿಯೂರಪ್ಪ್ಪನವರಂತಲ್ಲ, ಪಂಚಮಸಾಲಿ ಮೀಸಲಾತಿ ಬಗ್ಗೆ ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಹೀಗಾಗಿ, ಅವರ ಮೇಲೆ ಅಸಮಾಧಾನವಿತ್ತು. ಆದರೆ, ಬೊಮ್ಮಾಯಿ ಅವರು ನಮ್ಮ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಉತ್ತಮ ಪ್ರಯತ್ನಗಳನ್ನು ನಡೆಸಿದ್ದಾರೆ ಎಂದು ಹೇಳಿದರು. 

2ಎ ಮೀಸಲಾತಿಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿದಿದೆ. ಪಂಚಮಸಾಲಿ ಸಮಾಜ, ಗೌಡ, ಲಿಂಗಾಯಿತ ಸಮಾಜ, ಮಲೆಗೌಡರನ್ನು 2ಎಗೆ ಸೇರಿಸುವಂತೆ ಹೋರಾಟ ನಡೆದಿದೆ ಎಂದರು. 

ನಮ್ಮ ಸಮಾಜದವರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಆಯೋಗದ ಮುಂದೆ ಹೇಳಿಕೊಳ್ಳಲು ಬಂದಿದ್ದೇವೆ. ಸರಕಾರಕ್ಕೆ ನಮ್ಮ ಮನವಿಯನ್ನು ತಿಳಿಸಿದ್ದೇವೆ. ಸಿಎಂಗೆ ಮನವಿ ಕೊಡಲು ಹೋಗಬೇಕಿತ್ತು. ಈಗಿನ ಸಿಎಂ ಹುಬ್ಬಳ್ಳಿಯಲ್ಲಿ ನಮ್ಮ ಸಭೆಗೆ ಆಗಮಿಸಿ ನಮ್ಮ ಮನವಿ ಆಲಿಸಿದ್ದರು. ಯುಗಾದಿ ಹಬ್ಬದ ವೇಳೆಗೆ ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದು ಜಯಮೃತ್ಯುಂಜಯ ಶ್ರೀ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News