×
Ad

ಮೇಕೆದಾಟು ಪಾದಯಾತ್ರೆ: ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಆಹ್ವಾನ

Update: 2021-12-28 19:12 IST

ಮಂಡ್ಯ: ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಈ ಹೋರಾಟದ ಮುಂದಾಳತ್ವ ವಹಿಸಿದೆ ಅಷ್ಟೆ.  ಎಲ್ಲರೂ ಇದರಲ್ಲಿ ಭಾಗವಹಿಸಬಹುದು. ಕುಮಾರಸ್ವಾಮಿ ಅವರು ಟೀಕೆ ಮಾಡಿದರೂ ನಾವು ಬೇಸರಪಡುವುದಿಲ್ಲ. ಬೇಕಾದರೆ ಅವರು ಕೂಡ ಭಾಗವಹಿಸಬಹುದು. ನೀರು ಎಲ್ಲರಿಗೂ ಬೇಕಾಗಿದ್ದು, ಎಲ್ಲರೂ ಬನ್ನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಆವರಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‍ನ 137ನೇ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗಲೂ ಬಿಜೆಪಿ ಇರಲಿಲ್ಲ, ಆರೆಸ್ಸೆಸ್, ಜನಸಂಘ ಎಂದಿತ್ತು. ಆನಂತರ ಪರಿವರ್ತನೆಯಾಯಿತು ಎಂದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಈ ಇತಿಹಾಸ ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ನಮ್ಮ ಇತಿಹಾಸಕ್ಕೂ ಬಿಜೆಪಿ ಇತಿಹಾಸಕ್ಕೂ ವ್ಯತ್ಯಾಸವಿದೆ. ನಮ್ಮದು ತ್ಯಾಗ ಮತ್ತು ಬಲಿದಾನದ ಇತಿಹಾಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶಿವಪುರ ಧ್ವಜ ಸತ್ಯಾಗ್ರಹ ಹಾಗೂ ಮಂಡ್ಯದ ಇತಿಹಾಸ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಜತೆ ಬೆಸೆದುಕೊಂಡಿದೆ. ಬ್ರಿಟೀಷರ ನಿರ್ಬಂಧದ ನಡುವೆಯೂ ಇಲ್ಲಿನ ಹೋರಾಟಗಾರರು ಧ್ವಜ ಹಾರಿಸಿದ್ದು ಇತಿಹಾಸ. ಈ ನೆಲದಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.

ಈ ದೇಶಕ್ಕೆ ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಉದ್ಯೋಗ, ಆಹಾರ ಭದ್ರತೆ, ಮುಂತಾದ ಕ್ಷೇತ್ರಗಳಲ್ಲಿ ಆಭೂತಪೂರ್ವ ಸಾಧನೆಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್. ಕಾಂಗ್ರೆಸ್ ಆಡಳಿತದಿಂದ ವಿಶ್ವದಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಗುರಿತಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಕ್ಷದ ವರಿಷ್ಠರು ನನಗೆ ಕರ್ನಾಟಕ ಕಾಂಗ್ರೆಸ್ ಜವಾಬ್ಧಾರಿ ನೀಡಿದ್ದಾರೆ. ಬಹಳ ಕಷ್ಟಕಾಲದಲ್ಲಿ ನನಗೆ ಈ ಜವಾಬ್ಧಾರಿ ಬಂದಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ. ಆದರೆ, ನಾವು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದು ಅವರು ಹೇಳಿದರು.

ಕೋವಿಡ್ ಕಾಲದಲ್ಲಿ ಜನ ಮನೆಯಿಂದ ಹೊರಗೆ ಬರಲು ಹೆದರುವಾಗ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಗಲಿರುಳು ಜನಸೇವೆ ಮಾಡಿದರು. ಆಹಾರ ಕಿಟ್, ಔಷಧಿ ವಿತರಿಸಿದರು. ರೈತರು, ಕಾರ್ಮಿಕರ ಪರವಾಗಿ ಹೋರಾಟ ಮಾಡಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ದೀಪಹಚ್ಚಿ, ಗಂಟೆ ಭಾರಿಸಿ ಎನ್ನುತ್ತಾ ಇಂದಿಗೂ ಜನರು ನರಳುವಂತೆ ಮಾಡಿದರು ಎಂದು ಟೀಕಿಸಿದರು.

ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದ್ದು, ಪ್ರತಿ ಬೂತ್‍ನಲ್ಲೂ ನೋಂದಣಿ ಮಾಡಿಸಬೇಕು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸಿ, ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಬೇಕು ಎಂದು ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ದೊಡ್ಡದು. ಆದರೆ, ಏಳು ವರ್ಷದಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ತನ್ನ ಸಾಧನೆ ಏನೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದರು.

ನೆರೆಹಾವಳಿಗೆ ರೈತರ ಬೆಳೆದ ಬೆಳೆಗಳು ನಾಶವಾಗಿವೆ. ನೂರಾರು ಮನೆಗಳು ಕುಸಿದಿವೆ. ರಾಜ್ಯದ ಆಥಿರ್ಕ ಪರಿಸ್ಥಿತಿ ನೆಲಕಚ್ಚಿದೆ. ರಾಜ್ಯ ಸರಕಾರ ಈ ಬಗ್ಗೆ ಯೋಚಿಸುವ ಬದಲು ಮತಾಂತರ ನಿಷೇಧ ವಿಧೇಯಕ ಮಂಡಿಸಿ ಜನರ ಭಾವನೆ ಕೆರಳಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ, ಧೃವನಾರಾಯಣ್, ಮಾಜಿ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ಮೋಟಮ್ಮ, ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಉಮಾಶ್ರೀ, ಎಂ.ಎಸ್.ಆತ್ಮಾನಂದ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಸೇವಾದಳ ರಾಜ್ಯಾಧ್ಯಕ್ಷ ರಾಮಚಂದ್ರ, ಎಂಎಲ್ಸಿಗಳಾದ ಬಿ.ಕೆ.ಹರಿಪ್ರಸಾದ್, ದಿನೇಶ್ ಗೂಳಿಗೌಡ, ಡಿಸಿಸಿ ಅಧ್ಯಕ್ಷ ಸಿ.ಡಿ.ಗಂಗಾಧರ್, ಗುರುಚರಣ್, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News